ಸಾವಯವ ಕೃಷಿಯನ್ನು ಅನುಸರಿಸಿದರೆ ಕೃಷಿಕರಿಗೆ ಹಲವು ಲಾಭಗಳಿವೆ. ಮಣ್ಣಿನ ಫಲವತ್ತತೆ ಹೆಚ್ಚುತ್ತೆ, ಅಧಿಕ ಇಳುವರಿ ಸಿಗುತ್ತೆ, ಹೀಗೆ ಇದರ ಪ್ರಯೋಜನಗಳು ಹಲವು. ಎಳನೀರು ವ್ಯಾಪಾರಿಯೂ ಆದ ಈ ಸಾವಯವ ಕೃಷಿಕರು, ತಮ್ಮ ತೆಂಗಿನ ತೋಟದಲ್ಲಿ ಬಹಳ ವ್ಯತ್ಯಾಸ ಕಂಡಿದ್ದಾರೆ. ರಾಸಾಯನಿಕ ಬಳಸುತ್ತಿದ್ದಾಗ ಇದ್ದ ಸಮಸ್ಯೆಗಳು ಕಾಣೆಯಾಗಿವೆ. ವರ್ಷಕ್ಕೆ ಒಂದು ಮರದಲ್ಲಿ 480 ರಿಂದ 500 ತೆಂಗಿನ ಕಾಯಿಯನ್ನು ಪಡೆಯುತ್ತಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸಿಗರಹಳ್ಳಿ ಗ್ರಾಮದ ರೈತ ನಂಜುಂಡ ಅವರು ತೆಂಗು, ಅಡಿಕೆ, ಬಾಳೆ, ಏಲಕ್ಕಿ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಎಳನೀರು ವ್ಯಾಪಾರಿಯೂ ಆಗಿರುವ ಇವರು, ಸಾವಯವ ಕೃಷಿಕರೂ ಆಗಿದ್ದಾರೆ. ಡಾ.ಸಾಯಿಲ್ ಜೈವಿಕ ಗೊಬ್ಬರಗಳನ್ನು ಬಳಸಿ ಸಾವಯವ ಕೃಷಿ ಮಾಡುತ್ತಿದ್ದಾರೆ.
ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾಗ ನುಸಿ ಕಾಟ ಬಾಧಿಸುತ್ತಿತ್ತು, ಕಾಯಿಗಳ ಗಾತ್ರವೂ ಚಿಕ್ಕದಾಗಿದ್ದವು. ಆದರೆ ಈಗ ಯಾವುದೇ ರೋಗಬಾಧೆಯಿಲ್ಲದೆ, ಒಳ್ಳೆಯ ಗಾತ್ರದ ಕಾಯಿಗಳು ಬರುತ್ತಿವೆ. ಸಾವಯವ ಕೃಷಿಯ ಬಗ್ಗೆ ತಿಳಿದುಕೊಂಡಿದ್ದರಿಂದ ಕಳೆಗೆ ಕಳೆನಾಶಕ ಬಳಸದೇ ಬ್ರಶ್ ಕಟ್ಟರ್ ಬಳಸಿ ಮಣ್ಣಿಗೆ ಮಲ್ಚ್ ಮಾಡುತ್ತಿದ್ದಾರೆ. ಇದು ಕಳೆತು ಗೊಬ್ಬರವಾಗಿ ಮರಗಳಿಗೆ ಉತ್ತಮ ಪೋಷಕಾಂಶ ಒದಗಿಸುತ್ತಿದೆ. ಹಾಗಾಗಿ ಮಣ್ಣು ಈಗ ಮೃದುಗೊಂಡು ಎರೆಹುಳುಗಳು ಕಾಣಿಸಿಕೊಂಡಿವೆ. ಉಳುಮೆ ಮಾಡಿದರೆ ಬೇರುಗಳಿಗೆ ಹಾನಿಯಾಗುತ್ತವೆ ಎಂದು 2 ವರ್ಷದಿಂದ ಉಳುಮೆ ಮಾಡದೆ ತೋಟ ನಿರ್ವಹಣೆ ಮಾಡುತ್ತಿದ್ದಾರೆ.
ನಿರ್ವಹಣೆ ಕ್ರಮಗಳು
ತೆಂಗು ಬೆಳೆಯಲ್ಲಿ ವರ್ಷಕ್ಕೆ 8 ಬಾರಿ ಎಳನೀರು ಕೊಯ್ಲು ಮಾಡಬಹುದು ಮತ್ತು ಕಾಯಿಯಾದರೆ 3 ಬಾರಿ ಕೊಯ್ಲು ಮಾಡಬಹುದು. ನಂಜುಂಡ ಅವರು ತಮ್ಮ ತೋಟದಲ್ಲಿ ಒಂದು ಮರಕ್ಕೆ ವರ್ಷದಲ್ಲಿ 500 ಎಳನೀರು ಕೊಯ್ಲು ಮಾಡುತ್ತಿದ್ದಾರೆ. ಇದು ಸಾವಯವ ಕೃಷಿಯಲ್ಲಿ ಮಾತ್ರ ಸಾಧ್ಯ ಎನ್ನುತ್ತಾರೆ. ರಾಸಾಯನಿಕ ಪದ್ಧತಿಯಲ್ಲಿ ಕಾಯಿ ಉದುರುವ ಸಮಸ್ಯೆ ಹೆಚ್ಚಿರುವುದರಿಂದ ಕೇವಲ 300-400 ಎಳನೀರು ಕೊಯ್ಲು ಮಾಡುತ್ತಿದ್ದರು. ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಜೊತೆ ನಿರ್ವಹಣೆ ಕ್ರಮಗಳೂ ಕೂಡ ಮುಖ್ಯ. ಹಾಗಾಗಿ ನಿರ್ವಹಣೆ ಕ್ರಮಗಳನ್ನು ಕೂಡ ಬದಲಿಸಿದ್ದಾರೆ. ಮೊದಲೆಲ್ಲಾ ತೆಂಗಿನ ಗರಿಗಳನ್ನು ತೋಟದ ಒಳಗಡೆಯೇ ಸುಟ್ಟು ಹಾಕುತ್ತಿದ್ದರು. ಈಗ ತೆಂಗಿನ ತ್ಯಾಜ್ಯಗಳನ್ನು ಮಲ್ಚ್ ಮಾಡಿ ಕಳಿಯಲು ಬಿಡುತ್ತಿದ್ದಾರೆ. ಇದರಿಂದ ಮಲ್ಚಿಂಗ್ ಆಗುತ್ತದೆ ಮತ್ತು ವಾಯುಮಾಲಿನ್ಯ ಕಡಿಮೆಯಾಗುತ್ತದೆ.
ಖರ್ಚು ಕಡಿಮೆ
ರೈತರು ಕೃಷಿಯನ್ನು ಉದ್ಯಮವಾಗಿ ನೋಡಿದರೆ ಮಾತ್ರ ಲಾಭ ಪಡೆಯಲು ಸಾಧ್ಯ. ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸಿಕೊಳ್ಳುವ ಮಾರ್ಗಗಳನ್ನು ರೈತ ಕಂಡುಕೊಳ್ಳಬೇಕು. ಖರ್ಚನ್ನು ಕಡಿಮೆ ಮಾಡಲು ಕೂಡ ನಂಜುಂಡ ಅವರು ಕ್ರಮ ಕೈಗೊಂಡಿದ್ದಾರೆ. ಎಳನೀರು ಕೀಳುವುದಕ್ಕೆ ಕೂಲಿ ಖರ್ಚು ಹೆಚ್ಚು ಬರುತ್ತಿದ್ದರಿಂದ ಮರ ಹತ್ತುವ ಯಂತ್ರಗಳನ್ನು ಬಳಸಿ ತಾವೇ ಕಾಯಿ ಕೀಳುತ್ತಾರೆ. ಇದರಿಂದ ಕೂಲಿ ಕೆಲಸಗಾರರಿಗೆ ಕೊಡುವ ಹಣ ಉಳಿಸಬಹುದು. ಸಾವಯವ ಕೃಷಿ ಮಾಡುತ್ತಿರುವುದರಿಂದ ಈಗ ಉಳುಮೆಯನ್ನು ಕೂಡ ನಿಲ್ಲಿಸಿದ್ದಾರೆ. ಇದರಿಂದ 1.5 ಎಕರೆ ಉಳುಮೆ ಮಾಡಲು ಖರ್ಚಾಗುತ್ತಿದ್ದ ದುಡ್ಡು ಕೂಡ ಉಳಿತಾಯ ಮಾಡುತ್ತಿದ್ದಾರೆ.
ರೈತ ನಂಜುಂಡ ಅವರ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=4NOWVjt3Prw&t=9s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್