ರಾಸಾಯನಿಕ ಕೃಷಿಯ ಆಪತ್ತು, ಅದರಿಂದ ರೈತರು ಮತ್ತು ಜಗತ್ತು ಅನುಭವಿಸುತ್ತಿರುವ ದುಷ್ಪರಿಣಾಮಗಳು ಇಂದು ಎಲ್ಲರಿಗೂ ಅರಿವಾಗುತ್ತಾ ಸಾಗಿದೆ. ಹಾಗಾಗಿ ಎಷ್ಟೋ ರೈತರು ಸಾವಯವ ಕೃಷಿಯ ಕಡೆ ವಾಲಿದ್ದಾರೆ. ಸಾವಯವ ಕೃಷಿ ಉತ್ತಮ ಪರ್ಯಾಯವಾದರೂ ಸರಿಯಾದ ನಿರ್ವಹಣೆ ಕ್ರಮಗಳು ಮತ್ತು ಗೊಬ್ಬರ ಪೂರೈಕೆಯಲ್ಲಿ ಎಡವುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದ ಮೇಲೆ ಅತಿ ಹೆಚ್ಚು ಅವಲಂಬಿತರಾಗಿರುವುದು ಕೂಡ ಒಂದು. ಮೊದಲನೆಯದಾಗಿ ಕೊಟ್ಟಿಗೆ ಗೊಬ್ಬರ ಹೊರಗಿನಿಂದ ತರುವುದು ದುಬಾರಿ. ತಂದರೂ ಅದರ ಗುಣಮಟ್ಟ ಹೇಳುವುದು ಕಷ್ಟ. ಇದರಲ್ಲೂ ಕಲಬೆರಕೆಯಾಗುವುದರಿಂದ ಗುಣಮಟ್ಟದ ಗೊಬ್ಬರ ಒದಗಿಸುವುದು ಸಾವಯವ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕೊಟ್ಟಿಗೆ ಗೊಬ್ಬರ ಕೊಡಲೇಬೇಕು ಆದರೆ ಇದರ ಪ್ರಮಾಣ ಕಡಿಮೆ ಮಾಡಿಕೊಳ್ಳಬಹುದು. ಇದು ಹೇಗೆ ಅಂತೀರಾ..? ಇಲ್ಲಿದೆ ಉತ್ತರ.
ಹಸಿರೆಲೆ ಗೊಬ್ಬರ
ಹಸಿರು ಗೊಬ್ಬರವು ಕವರ್ ಬೆಳೆಯಾಗಿದ್ದು, ಇದನ್ನು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಉದ್ದೇಶಕ್ಕಾಗಿ ವಿಶೇಷವಾಗಿ ಬೆಳೆಯಲಾಗುತ್ತದೆ. ಹೂವು ಅಥವಾ ಬೀಜವನ್ನು ಬಿಡುವ ಮೊದಲು ಮಣ್ಣಿನಲ್ಲಿ ಉಳುಮೆ ಮಾಡಲಾಗುತ್ತದೆ. ಈ ಸಸ್ಯಗಳು ಕೊಳೆತು ಮಣ್ಣಿನಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಇದು ಫಲವತ್ತತೆಯನ್ನು ಸುಧಾರಿಸಲು, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಕಳೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಸಾವಯವ ಕೃಷಿಯಲ್ಲಿ ಹಸಿರೆಲೆ ಗೊಬ್ಬರ ಕೊಡುವುದು ತುಂಬಾ ಮುಖ್ಯ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಿ, ಪೋಷಕಾಂಶಗಳ ಪೂರೈಕೆ ಹೆಚ್ಚುತ್ತದೆ.
ಬೆಂಗಳೂರು ಹೊಸಕೋಟೆ ತಾಲ್ಲೂಕಿನ ರೈತ ಶ್ರೀನಿವಾಸ್ ಅವರು ತಮ್ಮ ಗುಲಾಬಿ ತೋಟದಲ್ಲಿ ಹಸಿರೆಲೆ ಗೊಬ್ಬರ ಬೆಳೆದಿದ್ದಾರೆ. ಕೊಟ್ಟಿಗೆ ಗೊಬ್ಬರ ಒಂದು ಲೋಡ್ ಗೆ 5 ಸಾವಿರ ಆಗುವುದರಿಂದ ಇವರು ಗುಲಾಬಿ ತೋಟದಲ್ಲಿ ಹುರುಳಿ ಬೆಳೆದಿದ್ದಾರೆ. 1 ಎಕರೆಗೆ 10 ಕೆ.ಜಿ ಹುರುಳಿ ಬಿತ್ತನೆ ಮಾಡಿದ್ದಾರೆ. ಇದಕ್ಕೆ ಖರ್ಚು ಮಾಡಿದ್ದು ಕೇವಲ 700 ರೂ. 50 ದಿನದ ನಂತರ ಹುರುಳಿ ಗಿಡಗಳನ್ನು ಮಣ್ಣಿಗೆ ಮಲ್ಚ್ ಮಾಡಿದರು. ಇದರಿಂದ ಗುಲಾಬಿಯಲ್ಲಿ ಕಾಣಿಸಿಕೊಂಡಿದ್ದ ಕಪ್ಪುಚುಕ್ಕೆ ರೋಗ ಮಾಯವಾಗಿದೆ ಎನ್ನುತ್ತಾರೆ ರೈತ ಶ್ರೀನಿವಾಸ್. ಗುಲಾಬಿಗೆ ಹುರುಳಿ ಬಹಳ ಸೂಕ್ತವಾಗುತ್ತದೆ. ಕಾರಣ ಇದನ್ನು ನೆರಳಿನಲ್ಲಿಯೂ ಬೆಳೆಯಬಹುದು. ಆದ್ದರಿಂದ ಇದು ಗುಲಾಬಿ ಗಿಡಗಳ ನೆರಳಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.
ಇದೇ ರೀತಿ ರೈತರು ತಮ್ಮ ಜಮೀನಿನಲ್ಲಿ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಲ್ಚ್ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಪೋಷಕಾಂಶ ಪೂರೈಕೆ ಮಾಡಬಹುದು. ದ್ವಿದಳ ಧಾನ್ಯಗಳು ಸಾರಜನಕ ಸ್ಥಿರೀಕರಣ ಮಾಡುವುದರಿಂದ ಹಸಿರೆಲೆ ಗೊಬ್ಬರಕ್ಕಾಗಿ ದ್ವಿದಳ ಧಾನ್ಯಗಳಾದ ಹುರುಳಿ, ಹಲಸಂದೆ, ಹೆಸರು ಹೀಗೆ ನಾನಾ ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಇವಲ್ಲದೇ ಗೊಬ್ಬರದ ಗಿಡ, ಸೆಣಬು ಮತ್ತು ಡಯಂಚಾವನ್ನು ಸಹ ಬೆಳೆದು ಮಲ್ಚಿಂಗ್ ಮಾಡಬಹುದು.
ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=kuD9t48KLIs
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್
#kannadablog #drsoil #biofertilizer #microbiagrotech #agricultureblog #agricultureinkannada #organicfarming #sustainablefarming #lowinvestment #soil #organicspray #soilerosion #soilfertility #integratedfarming #horticulture #rose #manure #organicmatter #legumes #nitrogenfixation
Contact