ಬಾಳೆ ಒಂದು ಪ್ರಮುಖ ವಾಣಿಜ್ಯ ಬೆಳೆ. ಸರಿಯಾದ ನಿರ್ವಹಣೆ ಮಾಡಿದರೆ ಒಳ್ಳೆ ಲಾಭ ಮಾಡಬಹುದು. ಆದರೆ ರೈತರು ಇದರಲ್ಲಿ ಎಡವುತ್ತಿದ್ದಾರೆ. ಎಲ್ಲಾರು ಮಾಡುವಂತೆ ಕೃಷಿ ಮಾಡುತ್ತಾ ಇತರ ಪದ್ಧತಿಗಳ ಕಡೆ ಗಮನ ಕೊಡದೇ ನಷ್ಟವಾದರೂ ಹಳೇ ಪದ್ಧತಿ ಮುಂದುವರೆಸುತ್ತಿದ್ದಾರೆ. ಬಾಳೆ ಕೃಷಿಯಿಂದ ಉತ್ತಮ ಇಳುವರಿ ಮತ್ತು ಲಾಭಗಳಿಸಲು ಇರುವ ಒಂದು ಮಾರ್ಗ ಗುಂಪು ಬಾಳೆ.
ಗುಂಪುಬಾಳೆ ಎಂದರೇನು?
ಸಾಮಾನ್ಯವಾಗಿ ರೈತರು ಒಂದು ಗುಣಿಯಲ್ಲಿ ಒಂದು ಬಾಳೆಗಿಡ ನಾಟಿ ಮಾಡುತ್ತಾರೆ. ಪಕ್ಕದಲ್ಲಿ ಬೆಳೆಯುವ ಕಂದುಗಳನ್ನು ಕತ್ತರಿಸಿ ಕೇವಲ ಒಂದು ಗಿಡ ಬೆಳೆಯಲು ಅವಕಾಶ ಮಾಡಿಕೊಡುತ್ತೇವೆ. ಇದು ಎಲ್ಲರೂ ಮಾಡುವ ವಿಧಾನ. ಗುಂಪು ಬಾಳೆಯಲ್ಲಿ ಅಕ್ಕ-ಪಕ್ಕದಲ್ಲಿ ಬೆಳೆಯುವ 5-6 ಕಂದುಗಳನ್ನು ಕತ್ತರಿಸದೇ ಬೆಳೆಯಲು ಬಿಡುಲಾಗುತ್ತದೆ. ಒಂದೇ ಕಡೆ 5-6 ಬಾಳೆಗಿಡಗಳನ್ನು ಗುಂಪಾಗಿ ಬೆಳೆಯುವುದರಿಂದ ಇದನ್ನು ಗುಂಪುಬಾಳೆ ಪದ್ಧತಿ ಎನ್ನಲಾಗುತ್ತದೆ. ಈ ಪದ್ಧತಿಯನ್ನು ಮಾಡಲು ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ 15 ಅಡಿ ಅಂತರ ಕೊಡಲಾಗುತ್ತದೆ.
ಗುಂಪುಬಾಳೆಯ ಉಪಯೋಗವೇನು?
ಗುಂಪು ಬಾಳೆ ಮಾಡುವುದರಿಂದ ಬಾಳೆಗಿಡಗಳು ಕಡಿಮೆಯಾಗುತ್ತವೆ, ಇಳುವರಿ ಕಡಿಮೆಯಾಗುತ್ತದೆ ಎನ್ನುವುದು ಎಷ್ಟೋ ಜನರ ಕಲ್ಪನೆ. ಆದರೆ ಗುಂಪುಬಾಳೆಯಲ್ಲಿ ಸಾಮಾನ್ಯ ಪದ್ಧತಿಗಿಂತ ಹೆಚ್ಚು ಇಳುವರಿ ಮತ್ತು ಆದಾಯ
ಪಡೆಯಬಹುದು.
- ಒಂದು ಗಿಡ ಇದ್ದಾಗ ಇಳುವರಿಗಾಗಿ ವರ್ಷಪೂರ್ತಿ ಕಾಯಬೇಕಾಗುತ್ತದೆ. ಗುಂಪುಬಾಳೆಯಲ್ಲಿ ಫಸಲು ಆರಂಭವಾದ ಮೇಲೆ 2-3 ತಿಂಗಳಿಗೊಮ್ಮೆ ಗೊನೆ ಬಿಡುತ್ತದೆ. ಇದರಿಂದ ನಿರಂತರವಾಗಿ ಆದಾಯ ಗಳಿಸಬಹುದು.
- 15 ಅಡಿ ಕೊಡುವುದರಿಂದ ಮಧ್ಯೆ ಅಂತರ್ಬೆಳೆಗಳನ್ನು ಬೆಳೆಯಬಹುದು. ಇದರಿಂದ ಹೆಚ್ಚುವರಿ ಆದಾಯ ಗಳಿಸಬಹುದು.
- ಒಂದು ಬಾಳೆಗಿಡ ಬೆಳೆದಾಗ 2-3 ಬಾರಿ ಮಾತ್ರ ಗೊನೆ ತೆಗೆದುಕೊಳ್ಳಬಹುದು. ಆದರೆ ಗುಂಪುಬಾಳೆಯಲ್ಲಿ ಹತ್ತಾರು ವರ್ಷಗಳವರೆಗೆ ಇಳುವರಿ ಪಡೆಯಬಹುದು.
- ಗುಂಪುಬಾಳೆ ಪದ್ಧತಿಯಲ್ಲಿ ಖರ್ಚು ಕಡಿಮೆಯಾಗುವುದರಿಂದ ಆದಾಯ ಹೆಚ್ಚುತ್ತದೆ.
- ಗಾಳಿ ಹೆಚ್ಚಾದಾಗ ಗುಂಪುಬಾಳೆಯಲ್ಲಿ ಗಿಡಗಳು ಒಂದಕ್ಕೊಂದು ಆಸರೆಯಾಗಿ ಗಟ್ಟಿಯಾಗಿ ನಿಲ್ಲುತ್ತವೆ.
ಗುಂಪುಬಾಳೆ ಪದ್ಧತಿಯಲ್ಲಿ ಗಾಳಿ-ಬೆಳಕು ಚೆನ್ನಾಗಿ ಸಿಕ್ಕು, ಚೆನ್ನಾಗಿ ಬೆಳೆಯುತ್ತವೆ. ಗುಂಪುಬಾಳೆಯಲ್ಲಿ ನಿರ್ವಹಣೆ ಚೆನ್ನಾಗಿ ಮಾಡುವುದರಿಂದ ಉತ್ತಮ ಇಳುವರಿ ನಿರೀಕ್ಷೆ ಮಾಡಬಹುದು. ಇದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಮಲ್ಚಿಂಗ್ ಆಗಿ ಬಳಸಬಹುದು. ಬಾಳೆಯ ತ್ಯಾಜ್ಯದಲ್ಲಿ ಪೊಟ್ಯಾಶ್ ಅಂಶ ಹೆಚ್ಚಾಗಿರುವುದರಿಂದ ಇದು ಒಳ್ಳೆ ಗೊಬ್ಬರವಾಗುತ್ತದೆ. ಎಲ್ಲಾರು ಮಾಡುವ ಕೃಷಿ ಪದ್ಧತಿಯಿಂದ ಎಲ್ಲಾರಿಗೂ ಸಿಗುವ ಫಲಿತಾಂಶವೇ ಸಿಗುವುದು. ಬೇರೆ ಫಲಿತಾಂಶ ಬೇಕೆಂದರೆ ನಾವು ಮಾಡುವ ಪದ್ಧತಿ ಬದಲಿಸಿದರೆ ಮಾತ್ರ. ಹಾಗಾಗಿ ರೈತರು ಸಾವಯವದಲ್ಲಿ ಗುಂಪುಬಾಳೆ ಬೆಳೆದು ಉತ್ತಮ ಇಳುವರಿ ಪಡೆಯಬಹುದು.
ಗುಂಪುಬಾಳೆಯ ಸಮಗ್ರ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ https://www.youtube.com/watch?v=zrtyQWmo6Mk&list=PLuN9VcGQAtK59OosL4SdibDzBLMxYn7J5&index=6
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
ಬರಹ: ರವಿಕುಮಾರ್