ಕಳೆದ 2 ವರ್ಷಗಳಿಂದ ಪೂರ್ವ ಆಫ್ರಿಕಾದಲ್ಲಿ ಬರಗಾಲ ಮನೆಮಾಡಿತ್ತು. ಇದರಲ್ಲಿ ಕೀನ್ಯಾ ದೇಶವೂ ಒಂದು. ಸತತ ನಾಲ್ಕು ಋತುಗಳು ಸಾಕಷ್ಟು ಮಳೆಯಾಗದ ಕಾರಣ 1980 ರ ದಶಕದ ನಂತರದ ಅತ್ಯಂತ ಕೆಟ್ಟ ಶುಷ್ಕ ಪರಿಸ್ಥಿತಿ ಕೀನ್ಯಾದಲ್ಲಿ ಸೃಷ್ಟಿಯಾಗಿತ್ತು. ನದಿಗಳು ಮತ್ತು ಬಾವಿಗಳು ಬತ್ತಿಹೋಗಿ, ಹುಲ್ಲುಗಾವಲುಗಳು ಧೂಳಾಗಿ ಮಾರ್ಪಟ್ಟಿತ್ತು. ಇದರಿಂದ ಕೀನ್ಯಾದಲ್ಲಿ 15 ಲಕ್ಷಕ್ಕೂ ಹೆಚ್ಚು ಜಾನುವಾರುಗಳ ಸಾವಿಗೀಡಾಗಿದ್ದವು. ಇಂತಹ ಪರಿಸ್ಥಿತಿಯಲ್ಲಿ ರೈತರ ಗೋಳು ಕೇಳಲಾಗದು. ಕೃಷಿ ಮಾಡಲಾಗದೇ ತಮಗೂ ಆಹಾರ ಇಲ್ಲದೇ, ತಾವು ಸಾಕುವ ದನಗಳಿಗೂ ಆಹಾರವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಸಿಗುವ ಸಣ್ಣ ಸಹಾಯವೂ ದೊಡ್ಡ ಪ್ರಭಾವ ಬೀರುತ್ತದೆ. ಕರ್ನಾಟಕದ ವ್ಯಕ್ತಿಯೊಬ್ಬರು ಕೀನ್ಯಾದ ಹಸುಗಳಿಗೆ ಮೇವು ಒದಗಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಯತ್ನಾಳದ ಮಲ್ಲಿಕಾರ್ಜುನ್ ಕೋರಿಯವರು 26 ವರ್ಷಗಳಿಂದ ಆಫ್ರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ತಮ್ಮದೇ ಗ್ರೀನ್ ಹೌಸ್ ನಲ್ಲಿ ಗುಲಾಬಿ ಹೂಗಳನ್ನು ಬೆಳೆದು ನೆದರ್ಲ್ಯಾಂಡ್ಸ್ ಗೆ ರಫ್ತು ಮಾಡುತ್ತಿದ್ದಾರೆ. ಕೀನ್ಯಾದಲ್ಲಾಗಿರುವ ಬರಗಾಲದಿಂದ ಸಾಯುತ್ತಿರುವ ಹಸುಗಳನ್ನು ನೋಡಿ ಮರುಕಗೊಂಡು ಸಹಾಯ ಹಸ್ತ ಚಾಚಿದರು. ಅಲ್ಲಿನ ಸರ್ಕಾರವೂ ಏನೂ ಮಾಡಲಾಗದಿದ್ದಾಗ ಕೋರಿಯವರು ತಮ್ಮದೇ ಖರ್ಚಿನಲ್ಲಿ ಹಸುಗಳಿಗೆ ಆಹಾರ ಮತ್ತು ನೀರು ನೀಡಿದರು. ಪ್ರತಿದಿನ ಟ್ರ್ಯಾಕ್ಟರ್ ನಲ್ಲಿ 2000 ಹಸುಗಳಿಗೆ ಮೇವು ತರಿಸಿ ಕೊಟ್ಟರು. ನೀರಿಗಾಗಿ ತಮ್ಮ ತೋಟದ ಹೊರಗೆ ಸಿಮೆಂಟ್ ಟ್ಯಾಂಕ್ ನಿರ್ಮಾಣ ಮಾಡಿ ದನಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.
ಇಲ್ಲಿನ ಕುರುಬ ಸಮುದಾಯದವರು ಕುರಿ-ಮೇಕೆ ಸಾಕುವಂತೆ ಅಲ್ಲಿನ ಮಸಾಯಿ ಸಮುದಾಯದವರು ನೂರಾರು ಹಸುಗಳನ್ನು ಸಾಕುತ್ತಾರೆ. ಆದರೆ ಅನಾವೃಷ್ಟಿಯ ಕಾರಣ ಮೇವು ಕೊರತೆ ಗಂಭೀರವಾಗಿ ಕಾಡಿತ್ತು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಕೋರಿಯವರು ಜಾನುವಾರುಗಳಿಗೆ ನೀರು, ಮೇವು ಒದಗಿಸುವ ಮಹತ್ಕಾರ್ಯಕ್ಕೆ ಮುಂದಾದರು. ಇವರು ಹಸುಗಳಿಗೆ ಮೇವು ಹಾಕುವ ದಾರಿಯಲ್ಲೇ ಸಂಜೆ ಜೀಬ್ರಾ, ಜಿಂಕೆಗಳು ಉಳಿದ ಮೇವನ್ನು ತಿನ್ನುತ್ತವೆ ಎನ್ನುತ್ತಾರೆ ಮಲ್ಲಿಕಾರ್ಜುನ್ ಕೋರಿ.
ಹೀಗೆ ಅತ್ಯಂತ ಅವಶ್ಯಕವಾದ ಸಂದರ್ಭದಲ್ಲಿ ಸಹಾಯಹಸ್ತ ನೀಡಿರುವ ಮಲ್ಲಿಕಾರ್ಜುನ್ ಕೋರಿಯವರ ಬಗ್ಗೆ ಅಪಾರ ಗೌರವವನ್ನು ಅಲ್ಲಿನ ಜನರು ಹೊಂದಿದ್ದಾರೆ.
ಮಲ್ಲಿಕಾರ್ಜುನ್ ಕೋರಿಯವರ ಸಂದರ್ಶನ ನೋಡಲು ಮತ್ತು ಅಲ್ಲಿನ ಜನರ ಅಭಿಪ್ರಾಯ ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=EUeuxoCc3yM&t=247s
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233
► ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de...
ಬರಹ: ರವಿಕುಮಾರ್
Blog