Blog

       ಡಿಸೆಂಬರ್ 23, ಭಾರತದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ.  ಈ ದಿನವನ್ನು ಕಿಸಾನ್ ದಿವಸ್’ ಅಥವಾ ರಾಷ್ಟ್ರೀಯ ರೈತರ ದಿನವೆಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಸಮಾಜಕ್ಕೆ ರೈತರ ಕೊಡುಗೆ, ದೇಶದ ಒಟ್ಟಾರೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮಹತ್ವವನ್ನು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಕೃಷಿ ಮತ್ತು ರೈತರಿಗಾಗಿ ದುಡಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಕಿಸಾನ್ ದಿವಸ್ ಎಂದು ಆಚರಿಸಲಾಗುತ್ತದೆ.

    

   ನಮ್ಮ ದೇಶದ ಬಹುತೇಕ ಜನರು ಜೀವನಾಧಾರಕ್ಕಾಗಿ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಜಗತ್ತಿನ ಅನ್ನದಾತ, ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ಗ್ರಾಮೀಣ ಸಮೃದ್ಧಿಗೆ ಗಮನಾರ್ಹ ಕೊಡುಗೆ ನೀಡುವವರು ರೈತರು. ಕೃಷಿ ಏರುಪೇರಾದರೆ ಪ್ರಪಂಚದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ರೈತರಿಗೆ ಶಿಕ್ಷಣ ಮತ್ತು ತಂತ್ರಜ್ಞಾನಗಳನ್ನು ಒದಗಿಸುವುದು ತುಂಬಾ ಮುಖ್ಯ. ರೈತರು ಮತ್ತು ಕೃಷಿ ಕ್ಷೇತ್ರ ಅಭಿವೃದ್ಧಿಯಾಗಲು ಸರ್ಕಾರ, ಸಂಘ-ಸಂಸ್ಥೆಗಳು, ವ್ಯಕ್ತಿಗಳ ಪಾತ್ರ ಬಹಳ ಮುಖ್ಯ.

 

ಸರ್ಕಾರ, ಕೃಷಿ ಇಲಾಖೆಗಳ ಪಾತ್ರ

-ಸರ್ಕಾರ ತರುವ ಯೋಜನೆಗಳು, ಸಹಾಯಧನಗಳು ತಳಮಟ್ಟದಲ್ಲಿರುವ, ಅವಶ್ಯಕತೆ ಇರುವ ರೈತರಿಗಿಂತ ಶ್ರೀಮಂತ ರೈತರಿಗೇ ಸಿಗುವುದು ಹೆಚ್ಚು. ಇವುಗಳ ಅನುಷ್ಠಾನ ಮತ್ತು ಲಭ್ಯತೆ ಎಲ್ಲಾ ರೈತರಿಗೆ ಸಿಗುವಂತಾಗಬೇಕು.

-ರಾಸಾಯನಿಕರಹಿತ ಕೃಷಿ, ಸಮಗ್ರ ಕೃಷಿ, ಉಪಕಸುಬುಗಳು ಇಂದಿನ ರೈತರಿಗೆ ಗೊತ್ತೇ ಇಲ್ಲ. ಇವುಗಳಿಂದ ಆಗುವ ಲಾಭಗಳನ್ನು ತಿಳಿಸುವುದು ಸರ್ಕಾರ, ಕೃಷಿ ಇಲಾಖೆಗಳ ಕೆಲಸವಾಗಬೇಕು.

- ತಂತ್ರಜ್ಞಾನಗಳು, ಕೃಷಿ ಮಾದರಿಗಳನ್ನು ಪರಿಚಯಿಸಿ, ರೈತರ ಕೈಗೆಟುಕುವಂತೆ ಮಾಡಬೇಕು. ರೋಗಗಳ ವಿರುದ್ಧ ಸಂಶೋಧನೆ, ನೀರಾವರಿ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು.

- ರೈತರು ಬೆಳೆದ ಬೆಳೆಗೆ ನಿರ್ದಿಷ್ಟ ಮತ್ತು ಉತ್ತಮ ಬೆಲೆ ಸಿಗುವಂತೆ ಸರ್ಕಾರಗಳು ಮಾಡಬೇಕು. ವ್ಯವಸಾಯವೇ ಮಾಡದ ಮಧ್ಯವರ್ತಿಗಳಲ್ಲಿ ಹಂಚಿ ಹೋಗುತ್ತಿರುವ ಹಣ ರೈತರಿಗೆ ತಲುಪುವಂತಾದರೆ, ಯಾವ ಸರ್ಕಾರವೂ ಸಾಲಮನ್ನ ಮಾಡುವ ಭರವಸೆ ಕೊಟ್ಟು ಮತ ಕೇಳುವ ಪ್ರಮೇಯ ಬರುವುದಿಲ್ಲ.

- ಆಹಾರ ಭದ್ರತೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಕೇವಲ ವಾಣಿಜ್ಯ ಬೆಳೆಗಳಲ್ಲದೇ ಆಹಾರ ಬೆಳೆಗಳಲ್ಲಿ ಒಂದಾದ ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು.

 

ಸಂಘ-ಸಂಸ್ಥೆಗಳ ಪಾತ್ರ

       ರೈತರ ಅಭಿವೃದ್ಧಿ ಮತ್ತು ಕಲ್ಯಾಣ ಮಾಡುವುದಕ್ಕಿಂತ, ರೈತರ ಹೆಸರು ಹೇಳಿಕೊಂಡು ಹೋರಾಟ ಮಾಡಿ ಹೆಸರು-ಹಣಗಿಟ್ಟಿಸಿಕೊಳ್ಳುವವರೇ ಜಾಸ್ತಿ. ಕೇವಲ ಹೋರಾಟ ಮಾಡದೇ, ಸರ್ಕಾರ ತರುವ ಯೋಜನೆಗಳು, ಸಹಾಯಧನಗಳು ಅವಶ್ಯಕತೆ ಇರುವ ರೈತರಿಗೆ ತಲುಪಿಸುವುದು, ರೈತರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸುವುದು ಮಾಡಿದರೆ ಅದೇ ಮುಖ್ಯವಾದ ಹೋರಾಟ. ಈಗಾಗಲೇ ಕೆಲವು ರೈತ ಸಂಘಗಳು ಇದನ್ನು ಮಾಡುತ್ತಿದ್ದು, ಇದು ವ್ಯಾಪಕವಾಗಿ ಇನ್ನೂ ಗಟ್ಟಿಗೊಳ್ಳಬೇಕು.

 

ರೈತರ ಪಾತ್ರ

- ಕೇವಲ ರೈತ ಸಂಘಗಳು, ಸರ್ಕಾರದ ಮೇಲೆ ಅವಲಂಬಿತರಾಗದೇ ತಮ್ಮ ಏಳ್ಗೆಗಾಗಿ ಸ್ವತಃ ದುಡಿಯುವುದು ಉತ್ತಮ. ಕೃಷಿಯನ್ನು ಒಂದು ಉದ್ಯಮದ ರೀತಿ ನೋಡಬೇಕು. ಖರ್ಚು ಕಡಿಮೆ ಮಾಡಿಕೊಳ್ಳುವ ಮತ್ತು ಇರುವ ಭೂಮಿಯಲ್ಲಿ ಹೆಚ್ಚು ಆದಾಯ ಗಳಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು.

- ರೈತರು ತಮ್ಮಲ್ಲೇ ಸಹಕಾರ ಸಂಘಗಳನ್ನು ಸ್ಥಾಪಿಸಿಕೊಂಡರೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ಬೆಳೆ ಮಾರಾಟ ಮಾಡಲು ಅನುಕೂಲವಾಗುತ್ತದೆ.

- ರಾಸಾಯನಿಕರಹಿತ ಕೃಷಿಯಾದ ಸಾವಯವಕೃಷಿ, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದು.

- ಮೌಲ್ಯವರ್ಧನೆ ಮಾಡಿ ಮಾರ್ಕೆಟ್ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು.

- ಆಹಾರ ಬೆಳೆ, ವಾಣಿಜ್ಯ ಬೆಳೆ, ಉಪಕಸುಬುಗಳು, ಅರಣ್ಯ ಕೃಷಿ ಹೀಗೆ ವಿವಿಧ ಆದಾಯ ಮೂಲಗಳ ಬಗ್ಗೆ ತಿಳಿದುಕೊಂಡು, ಅಳವಡಿಸಿಕೊಳ್ಳಬೇಕು.

- ಕೃಷಿ ಇಲಾಖೆಗಳಲ್ಲಿ ಸಹಾಯ ಮತ್ತು ಮಾಹಿತಿ ಪಡೆದುಕೊಂಡರೆ ಆಧುನಿಕ ತಂತ್ರಜ್ಞಾನ ಮತ್ತು ತಳಿಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರಿಂದ ಆರ್ಥಿಕವಾಗಿ ಮುಂದುವರೆಯಲು ಸಹಾಯವಾಗುತ್ತದೆ.

 

       ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತರ ದಿನದ ಉದ್ದೇಶವು, ರೈತರನ್ನು ಸಧೃಡಗೊಳಿಸುವುದಾಗಿದೆ. ರೈತ ಬೆಳೆದರೆ ದೇಶ ಬೆಳೆಯುತ್ತದೆ. ರೈತರು ಆರ್ಥಿಕವಾಗಿ ಸಬಲರಾದರೆ, ದೇಶದ ಆರ್ಥಿಕತೆ ಸಬಲವಾಗುತ್ತದೆ. ಕೃಷಿ ಕ್ಷೇತ್ರದ ಉದ್ಧಾರವೇ ದೇಶದ ಉದ್ಧಾರ. ಪ್ರತಿಯೊಬ್ಬ ರೈತನೂ ಒಬ್ಬ ಉದ್ಯಮಿಯಾಗಬೇಕು, ಜಗತ್ತಿಗೆ ಆಹಾರ ನೀಡಬೇಕು ಎಂಬುದು ನಮ್ಮ ಆಶಯ. ಜೈ ಕಿಸಾನ್, ಜೈ ಜವಾನ್.

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

ಕೃಷಿ ಶಿಕ್ಷಣ ಮತ್ತು ಸಾವಯವ ಉತ್ಪನ್ನಗಳ ನೇರ ಮಾರುಕಟ್ಟೆ(ಖರೀದಿ ಮತ್ತು ಮಾರಾಟ)ಗಾಗಿ ಧಾತು ಆ್ಯಪ್ ಡೌನ್ಲೋಡ್ ಮಾಡಿ: https://play.google.com/store/apps/de... 

 

ಬರಹ: ರವಿಕುಮಾರ್

 

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #charansingh  #kisandiwas  #nationalfarmersday  #farmer  #farmerunion  



Blog




Home    |   About Us    |   Contact    |   
microbi.tv | Powered by Ocat Business Promotion Service in India