ಅಕ್ಕ-ಪಕ್ಕದ ದ್ರಾಕ್ಷಿ ತೋಟಗಳು ಡೌನಿ ಬಾಧೆಯಿಂದ ನರಳುತ್ತಿದ್ದರೆ, ಈ ರೈತನ ದ್ರಾಕ್ಷಿ ತೋಟ ಮಾತ್ರ ಕಂಗೊಳಿಸುತ್ತಿದೆ. ಸಾವಯವ ಕೃಷಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಇವರು, ಸ್ವತಃ ತಾವೇ ರೋಗ, ಕೀಟಬಾಧೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆ ಕನಕಗಿರಿ ತಾಲ್ಲೂಕಿನ ಅಡವಿಬಾವಿ ಗ್ರಾಮದ ಯುವ ರೈತ ಹರಿಕೃಷ್ಣ ರಾಥೋಡ್ ಕೃಷಿಜ್ಞಾನ ಭಂಡಾರ ಎಂದರೆ ತಪ್ಪಾಗಲಾರದು. ಮಣ್ಣು, ರೋಗ-ಕೀಟಬಾಧೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಮಣ್ಣಿನ ಫಲವತ್ತೆ ತುಂಬಾ ಮುಖ್ಯ ಎಂಬುದು ಇವರ ನಿಲುವು. ಸಾವಯವ ಕೃಷಿಯಲ್ಲಿ ದ್ರಾಕ್ಷಿ ಬೆಳೆಯಲು ಅಸಾಧ್ಯ ಎಂದವರಿಗೆ ಚಾಲೆಂಜ್ ಆಗಿ ನಿಂತಿದ್ದಾರೆ. ಆಗಲ್ಲ ಎಂದವರೇ ಇವರ ತೋಟ ನೋಡಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಯಾವುದೇ ಬೆಳೆಯಾಗಲಿ, ಜೀವಿಯಾಗಲಿ ಆರೋಗ್ಯವಾಗಿರಲು ಸಮಗ್ರ ಪೋಷಕಾಂಶಗಳು ಬೇಕು. ರೈತರು ಮಾಡುತ್ತಿರುವ ರಾಸಾಯನಿಕ ಪದ್ಧತಿಯಿಂದ ತಾತ್ಕಾಲಿಕವಾಗಿ ಕೆಲವು ಪೋಷಕಾಂಶ ಕೊಡಬಹುದು ಅಷ್ಟೆ. ದೀರ್ಘಕಾಲ ಸಮಗ್ರ ಪೋಷಕಾಂಶಗಳ ನಿರ್ವಹಣೆಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ರೈತ ಹರಿಕೃಷ್ಣ. ಯಾವುದೇ ರಾಸಾಯನಿಕ ಬಳಸದೇ ಆರಂಭದಿಂದಲೂ ಸಂಪೂರ್ಣವಾಗಿ ಸಾವಯವದಲ್ಲೇ ದ್ರಾಕ್ಷಿ ಬೆಳೆದಿದ್ದಾರೆ. ಜೀವಾಮೃತ, ನೀಮಾಸ್ತ್ರ, ದಶಪರ್ಣಿ ಅರ್ಕಾ ಹೀಗೆ ಎಲ್ಲಾ ಸಂಪೂರ್ಣವಾಗಿ ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸಿ ಕೀಟ-ರೋಗಗಳ ನಿರ್ವಹಣೆ ಮಾಡಿದ್ದಾರೆ. ದಶಪರ್ಣಿ ಅರ್ಕಾ ತಯಾರಿಸುವ ವಿಧಾನವನ್ನು ಕೂಡ ವೀಡಿಯೋದಲ್ಲಿ ತಿಳಿಸಿದ್ದಾರೆ. 10-12 ರೀತಿಯ ಬಳ್ಳಿಯ ಎಲೆಗಳನ್ನು ಬಳಸಿ ದಶಪರ್ಣಿ ಅರ್ಕಾ ತಯಾರಿಸಿದ್ದಾರೆ.
ಮಲ್ಚಿಂಗ್(ಹೊದಿಕೆ)
ಮಲ್ಚಿಂಗ್ ಬಗ್ಗೆಯೂ ಕೂಡ ಮಾತನಾಡುವ ಹರಿಕೃಷ್ಣರವರು, ಇದರ ಮಹತ್ವಗಳನ್ನು ತಿಳಿಸುತ್ತಾರೆ. ಮಲ್ಚಿಂಗ್ ಮಾಡುವುದರಿಂದ ತೇವಾಂಶ ಕಾಪಾಡಬಹುದು. ಕಡಿಮೆ ನೀರಿನಿಂದಲೇ ಕೃಷಿ ಮಾಡಬಹುದು. ಮಲ್ಚಿಂಗ್ ಅಥವಾ ಹೊದಿಕೆ ಮಾಡುವುದರಿಂದ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಬಿಸಿಲಿನ ಶಾಖದಿಂದ ಕಾಪಾಡಬಹುದು. ಮಣ್ಣನ್ನು ಈ ರೀತಿ ಹೊದಿಕೆ ಮಾಡುವುದರಿಂದ ತೇವಾಂಶ ಮತ್ತು ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನು ರಕ್ಷಿಸಿ ಫಲವತ್ತತೆಯನ್ನು ಉಳಿಸಿಕೊಳ್ಳಬಹುದು.
ಹೀಗೆ ಸಾವಯವ ಪದ್ಧತಿಯಲ್ಲಿ ದ್ರಾಕ್ಷಿ ಬೆಳೆದಿರುವ ಈ ರೈತರ ಮಾತು ಕೇಳಿದರೆ, ಕೃಷಿ ವಿಜ್ಞಾನಿಯೇ ಹೇಳಿದಂತೆ ಭಾಸವಾಗುತ್ತದೆ. ಇವರು ದಶಪರ್ಣಿ ಅರ್ಕಾ ಮಾಡುವ ರೀತಿಯನ್ನು ತಿಳಿಸಿದ್ದಾರೆ. ಇದನ್ನು ತಿಳಿಯಲು ಕೆಳಗಿನ ವೀಡಿಯೋ ನೋಡಿ….
https://www.youtube.com/watch?v=uI4fP7FYkr0&list=PLuN9VcGQAtK63T_GRsrLU1D96XsWTZucE&index=5
ಬರಹ: ರವಿಕುಮಾರ್
#kannadablog #drsoil #microbiagrotech #agricultureblogs #agricultureinkannada #integratedfarming #organicfarming #sustainablefarming #highyield #healthycrop #soilhealth #fertileland #soilfertility #biofertilizers #lowinvestment #grapes #grapescultivation
Blog