ಮಳೆಯ ಆವಾಂತರದಿಂದಾಗಿ ಮಲೆನಾಡು ಭಾಗ ಪ್ರತಿವರ್ಷ ತತ್ತರಿಸುತ್ತದೆ. ಅಡಿಕೆ ಬೆಳೆಗಾರರ ಗೋಳು ಕೇಳುವಂತಿಲ್ಲ. ಒಂದು ಕಡೆ ಮಳೆಯ ರಭಸಕ್ಕೆ ಮಣ್ಣು ಸವಕಳಿಯಾಗ್ತಿದ್ರೆ, ಮತ್ತೊಂದು ಕಡೆ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ ನಲುಗುತ್ತಿವೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೃಷಿಕ ಅನ್ನಪ್ಪ ಅವರ ಅಡಿಕೆ ಬೆಳೆಗೂ ಸಹಿತ, ಇದೇ ರೀತಿ ಪ್ರತಿ ವರ್ಷ ಕೊಳೆ ರೋಗ ಬಾಧಿಸುತ್ತಿತ್ತು. ಆದ್ರೆ ಈಗ ಮಾತ್ರ ಅದರ ಚಿಂತೆಯಿಲ್ಲ.
ಈಗೇಕೆ ಕೊಳೆ ರೋಗವಿಲ್ಲ?
ಪ್ರತಿ ವರ್ಷ ಕೃಷಿಕ ಅಣ್ಣಪ್ಪ ಅವರು, ತಮ್ಮ ಅಡಿಕೆಗೆ ರಾಸಾಯನಿಕ ಗೊಬ್ಬರ ಬಳಸಿ ಬೆಳೆ ನಿರ್ವಹಣೆ ಮಾಡ್ತಿದ್ರು. ಹೀಗಾಗಿ ಕೊಳೆ ರೋಗದ ಸಮಸ್ಯೆ ಕಾಡ್ತಾಯಿತ್ತು. ಆದ್ರೆ ಈ ವರ್ಷ ಸಾವಯವ ಕೃಷಿ ಹಾದಿ ತುಳಿದಿದ್ದರಿಂದ, ಕೊಳೆ ರೋಗದ ತಲೆ ನೋವು ಇಲ್ಲ ಅಂತಾರೆ ಕೃಷಿಕ.
ಸಾವಯವ ಕೃಷಿಯಿಂದ ನಿಯಂತ್ರಣ ಹೇಗೆ?
ಮಣ್ಣಿನಲ್ಲಿ ಎರಡು ರಂಧ್ರಗಳಿರುತ್ತವೆ. ಒಂದು ಸಣ್ಣ ರಂಧ್ರ, ಮತ್ತೊಂದು ದೊಡ್ಡ ರಂಧ್ರ. ಸಣ್ಣ ರಂಧ್ರಗಳು ನೀರು ಹಿಡಿದಿಟ್ಟುಕೊಳ್ಳುತ್ತವೆ ಹಾಗೂ ದೊಡ್ಡ ರಂಧ್ರಗಳು ಗಾಳಿ ಹಿಡಿದಿಟ್ಟುಕೊಳ್ಳುತ್ತವೆ. ಮಳೆ ಹೆಚ್ಚಾಗಿ, ತೇವಾಂಶ ಹೆಚ್ಚಾದಾಗ, ಈ ಎರಡು ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಆಗ ಅಡಿಕೆ ಬೆಳೆಯ ಬೇರಿಗೆ ಸಿಗಬೇಕಾದ ಪ್ರಾಣವಾಯು(ಆಮ್ಲಜನಕ) ಸಿಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಫೈಟೋಪ್ತೆರಾ ಎಂಬ ಶಿಲೀಂಧ್ರ (ಅಪಾಯಕಾರಿ ಸೂಕ್ಷ್ಮಾಣು ಜೀವಿ), ಬೇರಿನ ಒಳಭಾಗ ಪ್ರವೇಶಿಸುತ್ತದೆ. ಆಗ ಕೊಳೆ ರೋಗ ಅಡಿಕೆ ಬೆಳೆಯಲ್ಲಿ ಚದುರತ್ತದೆ. ಹೀಗಾಗಿ ಗರಿಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ, ಅಡಿಕೆಯಲ್ಲಿ ಅಪಾಯಕಾರಿ ಶೀಲಿಂಧ್ರಗಳಿಂದ ಆವೃತ್ತಗೊಂಡು ಸಾಯುತ್ತವೆ.
ಕೃಷಿಕ ಅಣ್ಣಪ್ಪ ಅವರು, ರಾಸಾಯನಿಕ ಬಿಟ್ಟು ಸಾವಯವ ಕೃಷಿ ಅಳವಡಿಸಿಕೊಂಡಿದ್ದರಿಂದ, ಮಣ್ಣು ಸಡಿಲವಾಯಿತು. ಮಣ್ಣಿನಲ್ಲಿ ಸರಾಗವಾಗಿ ಗಾಳಿ ಪ್ರವೇಶವಾಗುತ್ತಿದೆ. ಹೀಗಾಗಿ ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಯಿತು, ಅಂದ್ರೆ ಬೇರನ್ನ ರಕ್ಷಿಸಿ ಅಡಿಕೆ ಬೆಳೆಯನ್ನ ಉಳಿಸುವ ಮೈಕೋರೈಸಾ ಎಂಬ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾದ್ವು. ಇದರಿಂದ ಈ ತೋಟಕ್ಕೆ ಈಗ ಕೊಳೆ ರೋಗ ಲಗ್ಗೆ ಇಡಲು ಸಾಧ್ಯವಾಗಲಿಲ್ಲ..
ರೈತಬಾಂಧವರೆ ರಾಸಾಯನಿಕ ಕೃಷಿ ಕೈ ಬಿಟ್ಟರೆ ನಿಮ್ಮ ತೋಟದಲ್ಲೆ ನಿಮ್ಮ ಬೆಳೆ ರಕ್ಷಣೆಗೆ ನಿಲ್ಲಲು, ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಹೆಚ್ಚಾಗುತ್ತೆ. ಇದರಿಂದ ನೀವು ಎಂದೆಂದಿಗೂ ಕೊಳೆ ರೋಗಗಳ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ.
ಮತ್ತಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=gSC1ZzUSzSY&t=5s