ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಹೆಮ್ಮೆಯ ಕೊಡುಗೆ ಡಾ.ಸಾಯಿಲ್ ನ ಯಶೋಗಾಥೆ ಹಳ್ಳಿ ಹಳ್ಳಿಯನ್ನೂ ತಲುಪಿದೆ. ರೈತರ ಬಾಳಿನ ಸಂಜೀವಿನಿಯಾಗಿ ಸಮಾಜವನ್ನು ಬೆಳಗುತ್ತಿದೆ. “ಹಳ್ಳಿಗಳ ಉದ್ಧಾರವೇ ದೇಶದ ಅಭಿವೃದ್ಧಿ…!” ಎಂಬ ಮಹಾತ್ಮ ಗಾಂಧೀಜಿಯವರ ಮಾತನ್ನು ಸಾಕಾರಗೊಳಿಸಲು ಈಗ “ಮೈಕ್ರೋಬಿ ಫೌಂಡೇಶನ್” ಮುನ್ನುಡಿ ಬರೆದಿದೆ.
ಮೈಕ್ರೋಬಿ ಫೌಂಡೇಶನ್. ಇದರ ಉದ್ದೇಶ ಹಳ್ಳಿಗಳನ್ನು ಮತ್ತು ರೈತ ಕುಟುಂಬಗಳನ್ನು ಅಭಿವೃದ್ಧಿಪಡಿಸುವುದು. ಇದನ್ನು ಕಾರ್ಯರೂಪಕ್ಕೆ ತರಲು ಮೈಕ್ರೋಬಿ ಫೌಂಡೇಶನ್ ಕೆಲಸ ಮಾಡುತ್ತಿದೆ. “ರೈತರಿಂದ..ರೈತರಿಗಾಗಿ” ಎಂಬ ಧ್ಯೇಯ ವಾಕ್ಯದಿಂದ ಕೆಲಸ ಮಾಡುತ್ತಾ, ರೈತರ ಏಳ್ಗೆಗೆ ಹಗಲಿರುಳು ಶ್ರಮಿಸುತ್ತಿದೆ.
ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರು, ನಡೆದಾಡುವ ಕೃಷಿ ವಿಶ್ವಕೋಶ ಎಂದೇ ಪ್ರಖ್ಯಾತರಾಗಿರುವ ರೈತ ಚಕ್ಷು ಡಾ.ಕೆ.ಆರ್.ಹುಲ್ಲುನಾಚೆಗೌಡರು ಮೈಕ್ರೋಬಿ ಫೌಂಡೇಶನ್ ಸಂಸ್ಥಾಪಕರು. ಸಮಾಜಕ್ಕೆ ನಿರಂತರವಾಗಿ ಏನಾದರೂ ಕೊಡುತ್ತಲೇ ಇರಬೇಕೆಂಬ ಗೌಡರ ಹಂಬಲ, ಮೈಕ್ರೋಬಿ ಫೌಂಡೇಶನ್ ಗೆ ಪ್ರೇರಣಾ ಶಕ್ತಿಯಾಗಿದೆ. ಗ್ರಾಮೀಣ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನಾ ಯೋಜನೆಗಳು ರೂಪುಗೊಳ್ಳುತ್ತಿದ್ದು, ಒಂದೊಂದಾಗಿ ಜಾರಿಯಾಗುತ್ತಿದೆ.
ಪ್ರತಿ ಜಿಲ್ಲೆಯಲ್ಲಿ ಮಾದರಿ ಗ್ರಾಮಗಳನ್ನು ರೂಪಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ಮೊದಲ ಹಂತದಲ್ಲಿ 9 ಜಿಲ್ಲೆಗಳಿಂದ 9 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಲು ಹೊರಟಿದೆ. ವಿವಿಧ ಇಲಾಖೆಗಳ ಸಹಾಯದಿಂದ, ಅವಿರತ ಶ್ರಮಿಗಳಿರುವ ತಂಡದೊಂದಿಗೆ ಈ ಕೆಲಸ ಕೈಗೊಂಡಿದೆ. ಮಣ್ಣಿನ ಮಹತ್ವ ತಿಳಿಸಲು ಮತ್ತು ಮಣ್ಣನ್ನು ಫಲವತ್ತಾಗಿಸಲು, ಜೀವಂತವಾಗಿಸಲು “ಮಣ್ಣು ಜೀವಿಸಲಿ” ಎಂಬ ಅಭಿಯಾನವನ್ನು ಯಶಸ್ವಿಯಾಗಿ ಮೈಕ್ರೋಬಿ ಫೌಂಡೇಶನ್ ನಡೆಸುತ್ತಿದೆ. ಈ ಅಭಿಯಾನದಡಿ ಈಗಾಗಲೇ ಬಾಗಲಕೋಟೆ, ಕೊಪ್ಪಳ, ಹಾಸನ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಜಿಲ್ಲೆಗಳಲ್ಲಿ ರೈತರಿಗೆ ಉಚಿತ ಕಾರ್ಯಾಗಾರವನ್ನು ಏರ್ಪಡಿಸಿ, ಮಣ್ಣಿನ ಮಹತ್ವವನ್ನು ತಿಳಿಸುವ ಕಾರ್ಯ ಮಾಡಿದೆ. ಜೊತೆಯಲ್ಲಿ ಸಾಧಕ ಸಾವಯವ ರೈತರಿಗೆ “ಸಾವಯವ ಕೃಷಿ ರತ್ನ” ಪ್ರಶಸ್ತಿ ನೀಡಿ ರೈತರನ್ನು ಸಾವಯವ ಕೃಷಿಯೆಡೆಗೆ ಬರಲು ಪ್ರೇರಣೆ ನೀಡುತ್ತಿದೆ.
“ಜೈ ಜವಾನ್, ಜೈ ಕಿಸಾನ್” ಕೇವಲ ಬಾಯಿಮಾತಿಗೆ ಹೇಳಿದರೆ ಸಾಲದು; ನಾವು ಮಾಡುವ ಕೆಲಸದಲ್ಲಿ ತೋರಿಸಬೇಕು ಎಂದು ರೈತರಿಗೆ ಮತ್ತು ದೇಶಕಾಯುವ ಯೋಧರ ಏಳಿಗೆಗೆ ಅನುದಾನ ನೀಡುತ್ತಿದೆ. ಮೈಕ್ರೋಬಿ ಫೌಂಡೇಶನ್ ಹೀಗೆ ತಮ್ಮ ದೂರದೃಷ್ಠಿಯಿಂದ ಉನ್ನತ ಕಾರ್ಯಗಳನ್ನು ಮಾಡಲು ಶಕ್ತಿಗಳಿಸಲಿ ಎಂದು ಆಶಿಸೋಣ.
ಬರಹ: ರವಿಕುಮಾರ್
Blog