ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ನಿರಂತರವಾಗಿ ಜಾರಿಗೆ ತರುತ್ತಲೇ ಇರುತ್ತದೆ. ಆ ಪೈಕಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ಯೋಜನೆಯೂ ಒಂದಾಗಿದೆ. 2014-15 ರಲ್ಲಿ ಆರಂಭವಾದ ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ ಕೃಷಿಗೆ ಮತ್ತಷ್ಟು ಉತ್ತೇಜನ ನೀಡುತ್ತಿದೆ.
ಕೃಷಿ ಯಂತ್ರೋಪಕರಣದ ಯೋಜನೆಯಲ್ಲಿ ಸರ್ಕಾರ ಈಗಾಗಲೇ 50% ಸಹಾಯಧನವನ್ನು ನೀಡುತ್ತಾ ಬಂದಿದೆ. ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈರಿಗೆ 90% ರಷ್ಟು ಸಹಾಯಧನವನ್ನು ನೀಡುತ್ತಿದೆ.
ರೀಪರ್ ಅಥವಾ ಬೆಳೆಗಳನ್ನು ಕಟಾವು ಮಾಡುವ ಯಂತ್ರ, ನೇಗಿಲು, ಚಾಪ್ ಕಟರ್, 2hp ಚಾಪ್ ಕಟರ್, ಹಿಟ್ಟಿನ ಗಿರಣಿ, 6hp ಕಳೆ ಕೀಳುವ ಯಂತ್ರ, ಕಳೆ ಕೀಳುವಯಂತ್ರ 9hp, 6 ಅಡಿ ಲೆವೆಲರ್ ಬ್ಲೇಡ್ ಯಂತ್ರ, ಕಲ್ಟಿವೇಟರ್, 42 ಬ್ಲೇಡ್ ರೋಟವೇಟರ್, ಬೆಳೆಗಳ ಕಟಾವು ಯಂತ್ರ, ಪವರ್ ಟಿಲ್ಲರ್, ಬೀಜ ಮತ್ತು ಗೊಬ್ಬರವನ್ನು ಬಿತ್ತುವ ಯಂತ್ರ, ಟ್ರ್ಯಾಕ್ಟರ್ ಸೇರಿದಂತೆ ಹಲವು ಕೃಷಿ ಉಪಕರಣಗಳಿಗೆ ಸರ್ಕಾರದಿಂದ 50% ಸಬ್ಸಿಡಿ ದೊರೆಯುತ್ತಿದೆ.
2022ರ ಫೆಬ್ರವರಿ 1ರಂದು ಮಂಡಿಸಿದ ಬಜೆಟ್ ನಲ್ಲಿ ಕೃಷಿಗೆ ಬಂಪರ್ ಕೊಡುಗೆಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕೃಷಿ ಯಂತ್ರೋಪಕರಣಗಳ ಬೆಲೆ ಇಳಿಕೆ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೃಷಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ, ಸ್ಪ್ರೇಗಳ ಸಿಂಪಡಣೆ ಹಾಗೂ ಬೆಳೆ ಸಮೀಕ್ಷೆಗಾಗಿ ಡ್ರೋನ್ ಗಳ ಬಳಕೆ ಮಾಡುವುದಾಗಿ ತಿಳಿಸಿದ್ದು, ಕೃಷಿ ಯಂತ್ರೋಪಕರಣಗಳ ಪಟ್ಟಿಯಲ್ಲಿ ಇದೀಗ ಡ್ರೋನ್ ಕೂಡ ಸೇರ್ಪಡೆಯಾಗಿದೆ.
ಬಾಡಿಗೆ ಕೇಂದ್ರಗಳು, ಹೈಟೆಕ್ ಹಬ್ ಗಳು, ಡ್ರೋನ್ ತಯಾರಿಕಾ ಕಂಪನಿಗಳು ಮತ್ತು ನವೋದ್ಯಮಗಳಿಂದ ಬಾಡಿಗೆ ಪಡೆದು ರೈತರ ಜಮೀನಿನಲ್ಲಿ ಡ್ರೋನ್ ತಂತ್ರಜ್ಞಾನ ಅನುಷ್ಠಾನಗೊಳಿಸುವ ಏಜೆನ್ಸಿಗಳು ಅಥವಾ ಸಂಸ್ಥೆಗಳಿಗೆ ಪ್ರತಿ ಹೆಕ್ಟೇರ್ ಭೂಮಿಗೆ 6 ಸಾವಿರ ರೂ. ಅನಿರೀಕ್ಷಿತ ವೆಚ್ಚ ಒದಗಿಸಲಾಗುತ್ತದೆ. ಆದರೆ ಡ್ರೋನ್ ಗಳನ್ನು ಸ್ವತಃ ಖರೀದಿಸುವ ಅನುಷ್ಠಾನ ಏಜೆನ್ಸಿಗಳಿಗೆ ನೀಡುವ ಅನಿರೀಕ್ಷಿತ ವೆಚ್ಚವನ್ನು ಪ್ರತಿ ಹೆಕ್ಟೇರ್ ಗೆ 3 ಸಾವಿರ ರೂ.ಗೆ ಸೀಮಿತಗೊಳಿಸಲಾಗಿದೆ. ಈ ಆರ್ಥಿಕ ನೆರವು ಮತ್ತು ಸಹಾಯಧನ 2023 ಮಾರ್ಚ್ 31ರ ವರೆಗೆ ಮಾತ್ರ ಅನ್ವಯವಾಗುತ್ತದೆ.
ಡ್ರೋನ್ ಅಪ್ಲಿಕೇಶನ್ ಮೂಲಕ ಎಲ್ಲ ರೀತಿಯ ಕೃಷಿ ಸೇವೆಗಳನ್ನು ಒದಗಿಸುವ ಸಲುವಾಗಿ ರೈತರ ಸಹಕಾರಿ ಸೊಸೈಟಿಗಳು , FPOಗಳು ಮತ್ತು ಗ್ರಾಮೀಣ ಉದ್ಯಮಿಗಳು ಈಗಾಗಲೇ ಸ್ಥಾಪಿಸಿರುವ ಗ್ರಾಹಕ ಬಾಡಿಗೆ ಕೇಂದ್ರಗಳು ಡ್ರೋನ್ ಖರೀದಿಸಲು ಡ್ರೋನ್ ಮೂಲ ವೆಚ್ಚದ 40% ಮತ್ತು ಅದರ ಲಗತ್ತುಗಳು ಅಥವಾ 4 ಲಕ್ಷ ರೂ. ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಹಣಕಾಸಿನ ನೆರವು ಲಭ್ಯವಾಗುತ್ತದೆ. ಕೃಷಿ ಯಾಂತ್ರೀಕರಣ ಉಪಮಿಷನ್(ಎಸ್ಎಂಎಎಂ) ಅಥವಾ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಅಥವಾ ಇನ್ನಿತರೆ ಯೋಜನೆಗಳ ಮೂಲಕ ಆರ್ಥಿಕ ನೆರವು ಪಡೆದಿರುವ ರೈತರ ಸಹಕಾರಿ ಸೊಸೈಟಿಗಳು, ಎಫ್ ಪಿ ಒಗಳು ಮತ್ತು ಗ್ರಾಮೀಣ ಉದ್ಯಮಶೀಲರು ಸ್ಥಾಪಿಸಿರುವ ಹೊಸ ಗ್ರಾಹಕ ಬಾಡಿಗೆ ಕೇಂದ್ರಗಳು ಅಥವಾ ಹೈಟೆಕ್ ಹಬ್ ಗಳು ಸಹ ಕೃಷಿ ಯಂತ್ರೋಪಕರಣಗಳ ಜತೆಗೆ ಡ್ರೋನ್ ಅನ್ನು ಯಂತ್ರವಾಗಿ ಸೇರ್ಪಡೆ ಮಾಡಬಹುದು. ಗ್ರಾಹಕರ ಬಾಡಿಗೆ ಕೇಂದ್ರಗಳನ್ನು ಸ್ಥಾಪಿಸುವ ಕೃಷಿ ಪದವೀಧರರು ಡ್ರೋನ್ ಮೂಲ ವೆಚ್ಚದ 50% ಅಥವಾ ಡ್ರೋನ್ ಖರೀದಿಗೆ 5 ಲಕ್ಷ ರೂ. ವರೆಗೆ ಅನುದಾನ ಪಡೆಯಲು ಅರ್ಹರಾಗಿರುತ್ತಾರೆ. ಗ್ರಾಮೀಣ ಉದ್ಯಮಶೀಲರು ಮಾನ್ಯತೆ ಪಡೆದ ಪ್ರೌಢಶಿಕ್ಷಣ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ), ಯಾವುದೇ ಅಧಿಕೃತ ರಿಮೋಟ್ ಪೈಲಟ್ ತರಬೇತಿ ಸಂಸ್ಥೆ ನಿರ್ದಿಷ್ಟಪಡಿಸಿದ ಸಂಸ್ಥೆಯಿಂದ ರಿಮೋಟ್ ಪೈಲಟ್ ಪರವಾನಗಿ ಹೊಂದಿರಬೇಕು.
ಗ್ರಾಹಕ ಬಾಡಿಗೆ ಕೇಂದ್ರಗಳು ಮತ್ತು ಹೈಟೆಕ್ ಹಬ್ ಗಳು ಸಬ್ಸಿಡಿ ದರದಲ್ಲಿ ಡ್ರೋನ್ ಗಳನ್ನು ಖರೀದಿಸಲು ಅನುವು ಕಲ್ಪಿಸಿದರೆ, ತಂತ್ರಜ್ಞಾನ ಎಲ್ಲರ ಕೈಗೆಟಕುವಂತೆ ಮಾಡಿದಂತಾಗುತ್ತದೆ. ಇದರ ಪರಿಣಾಮವಾಗಿ ಡ್ರೋನ್ ತಂತ್ರಜ್ಞಾನದ ವ್ಯಾಪಕ ಅಳವಡಿಕೆಗೆ ಕಾರಣವಾಗುತ್ತದೆ. ಇದು ಭಾರತದಲ್ಲಿ ಸಾಮಾನ್ಯ ರೈತರಿಗೆ ಡ್ರೋನ್ ಗಳು ಹೆಚ್ಚು ಲಭ್ಯವಾಗುವಂತೆ ಮಾಡಿದಂತಾಗುತ್ತದೆ. ಎಲ್ಲಕ್ಕಿಂತ ವಿಶೇಷವಾಗಿ, ದೇಶೀಯ ಡ್ರೋನ್ ಉತ್ಪಾದನೆಯನ್ನು ಗಣನೀಯವಾಗಿ ಉತ್ತೇಜಿಸಿದಂತಾಗುತ್ತದೆ.
ಕೃಷಿ ಯಂತ್ರೋಪಕರಣಗಳನ್ನು ಕೃಷಿಯಲ್ಲಿನ ಪ್ರಮುಖ ಸಾಧನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಸಮಯಕ್ಕೆ ಕೃಷಿ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಮಾನವ ಶ್ರಮವನ್ನು ಕಡಿಮೆ ಮಾಡುತ್ತದೆ. ಕೃಷಿಯ ತ್ವರಿತ ಅಭಿವೃದ್ಧಿಯೊಂದಿಗೆ, ಕೃಷಿ ಸಮಸ್ಯೆಗಳನ್ನು ಸರ್ಕಾರ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಕಲ್ಪಿಸಿಕೊಡುತ್ತಿರುವುದು ಕೃಷಿ ಕ್ಷೇತ್ರಕ್ಕೆ ಖುಷಿ ಸಂಗತಿ.
ವರದಿ: ವನಿತಾ ಪರಸನ್ನವರ್
ಯಂತ್ರವಿಲ್ಲದೆ ಮಣ್ಣಿನ ಪರೀಕ್ಷೆ ಹೇಗೆ ಗೊತ್ತಾ?
https://youtu.be/mOexufefUcQ
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
► Microbi Agrotech Website: http://www.microbiagro.com
► Subscribe to Microbi Agrotech: https://youtube.com/c/MICROBIAGROTECHPVTLTDKANNADA
► Like us on Facebook: https://www.facebook.com/microbiagrotech/