Blog

ಕೃಷಿ ಭೂಮಿ ಹೆಚ್ಚಾಗದಿದ್ದರೂ, ಇದ್ದ ಜಾಗದಲ್ಲೇ ರೈತರು ತೋಟಗಾರಿಕೆಯಿಂದ ಅಧಿಕ ಇಳುವರಿ ತೆಗೆದು ಉತ್ತಮ ಆದಾಯ ಪಡೆಯುತ್ತಿರುವುದು, ಕೃಷಿಯಿಂದ ವಿಮುಖರಾಬೇಕೆಂದಿದ್ದ ರೈತರಲ್ಲಿ ಭಯ ದೂರಮಾಡಿದೆ. ತೋಟಗಾರಿಕೆಯಿಂದ ಉತ್ತಮ ಆದಾಯ ಪಡೆಯುವುದರಿಂದ ರೈತರಿಗೆ ಒಕ್ಕಲುತನದ ಮೇಲಿನ ಅಭಿಮಾನ,  ಪ್ರೀತಿ ಮತ್ತಷ್ಟು ಹೆಚ್ಚಾಗಿದ್ದು, ಇದಕ್ಕೆ ಸರ್ಕಾರ ಕೂಡ ಕೈ ಜೋಡಿಸಿದೆ.


ನೀರಾವರಿ ಮೂಲಗಳಾದ ತೆರೆದ ಬಾವಿ, ಕೊಳವೆ ಬಾವಿ, ನದಿ, ಕೆರೆಗಳು ಬತ್ತುತ್ತಿದ್ದರೂ, ವರ್ಷದಿಂದ ವರ್ಷಕ್ಕೆ ತೋಟಗಾರಿಕೆ ಬೆಳೆಗಳನ್ನುಬೆಳೆಯುವ ವ್ಯಾಪ್ತಿ ಹೆಚ್ಚಾಗುತ್ತಿದೆ. ವಸತಿ ಬಡಾವಣೆಗಳು, ಕೈಗಾರಿಕೆಗಳು, ರಸ್ತೆಗಳು ಮುಂತಾದವುಗಳಿಗಾಗಿ ಪ್ರತಿವರ್ಷ ಕೃಷಿ ಜಮೀನು ಕಡಿಮೆಯಾಗುತ್ತಿದೆ ಎಂಬ ಆತಂಕದ ನಡುವೆ, ತೋಟಗಾರಿಕೆ ವ್ಯಾಪ್ತಿ ಹೆಚ್ಚುತ್ತಿರುವುದು ಸಮಾಧಾನದ ಸಂಗತಿಯಾಗಿದೆ.


ಕೇಂದ್ರ-ರಾಜ್ಯ ಸರಕಾರಗಳ ಕೆಲವು ಯೋಜನೆಗಳು ತೋಟಗಾರಿಕೆ ರೈತರಿಗೆ ಉತ್ತೇಜನ ನೀಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ತೋಟಗಾರಿಕೆ ಬೆಳೆಗಳನ್ನುಬೆಳೆಯಲು ಮುಂದಾಗುತ್ತಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್(ಎನ್‌ಎಂಎಚ್) ಯೋಜನೆಯಡಿ ಖಾಸಗಿ ವಲಯದಲ್ಲಿತರಕಾರಿ ಬೀಜೋತ್ಪಾದನೆಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಮಾವು, ದ್ರಾಕ್ಷಿ, ದಾಳಿಂಬೆ, ಚಿಕ್ಕು, ಪೇರಲ, ಬಾಳೆ, ಪಪ್ಪಾಯ, ನಿಂಬೆ, ಹೂವಿನ ಬೆಳೆಗಳಿಗೆ ಸಹಾಯಧನ ನೀಡಲಾಗುವುದು. ಈರುಳ್ಳಿ ಶೇಖರಣಾ ಘಟಕಗಳಿಗೆ ಹಾಗೂ ಪಾಲಿಹೌಸ್ ಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಪಾಲಿಹೌಸ್‌ಗೆ ಪ್ರತಿ 10 ಗುಂಟೆಗೆ 4.67 ಲಕ್ಷ ರೂ. ಹಾಗೂ ನೆರಳು ಪರದೆಗೆ ಪ್ರತಿ 10 ಗುಂಟೆಗೆ 3.60 ಲಕ್ಷ ರೂ., ಗರಿಷ್ಠ 1 ಎಕರೆವರೆಗೆ ಶೇ.50 ರಷ್ಟು ಸಹಾಯಧನ ನೀಡಲಾಗುವುದು.

                                                   
ತೋಟಗಾರಿಕೆಯಲ್ಲಿ ಯಾಂತ್ರೀಕರಣ ಕಾರ್ಯಕ್ರಮದಡಿ  20 ಎಚ್‌ಪಿ ವರೆಗಿನ ಸಾಮರ್ಥ್ಯದ ಟ್ಯ್ರಾಕ್ಟರ್ / ಪವರ್ ಟೇಲರ್ ಕೃಷಿ ಉಪಕರಣಗಳಿಗೆ ಶೇ.25 ರಂತೆ ಗರಿಷ್ಠ 30,000 ರೂ. ವರೆಗೆ ಸಹಾಯಧನ ನೀಡಲಾಗುವುದು. ಸಾವಯವ ಕೃಷಿ ಘಟಕಗಳಾದ ಎರೆಹುಳುಗೊಬ್ಬರ ಘಟಕ ಅಥವಾ ಜೀವಸಾರ ಘಟಕಗಳಿಗೆ ಶೇ .50 ರಂತೆ ಗರಿಷ್ಠ 30,000 ರೂ. ವರೆಗೆ ಸಹಾಯಧನ ನೀಡಲಾಗುವುದು. ಮಾವು ಪುನಃಶ್ಚೇತನಕ್ಕೆ ಪ್ರತಿ ಹೆಕ್ಟೇರ್ ಗೆ 20,000 ರೂ. ವರೆಗೆ ಸಹಾಯಧನ ನೀಡಲಾಗುವುದು.


ತೋಟಗಾರಿಕೆ ಬೆಳೆಗಳ ನಿರ್ವಹಣೆಗಾಗಿ ಪೋಷಕಾಂಶ / ರೋಗ ಮತ್ತು ಕೀಟನಾಶಕಗಳ ಖರೀದಿಗಾಗಿ ಶೇ.50 ರಂತೆ ಪ್ರತಿ ಹೆಕ್ಟೇರ್ ಗೆ 1,000 ರೂ. ನಂತೆ, ಗರಿಷ್ಠ 4  ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುವುದು. ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸಲು ಪರಾಗಸ್ಪರ್ಶ ವೃದ್ಧಿಗಾಗಿ ಜೇನು ಕುಟುಂಬ ಹಾಗೂ ಜೇನು ಪೆಟ್ಟಿಗೆಗೆ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ನೀರು ಸಂಗ್ರಹಣಾ ಘಟಕಗಳಿಗೆ (20 -20 -3 ಮೀ. ಅಳತೆ) ಶೇ.50 ರಂತೆ 60,000 ರೂ.ವರೆಗೆ ಸಹಾಯಧನ ನೀಡಲಾಗುವುದು.


 ಸಮಗ್ರ ತೋಟಗಾರಿಕೆ ಅಭಿವದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಉತ್ಪಾದನಾರಂಗದಲ್ಲಿ ನಿಖರ ಬೇಸಾಯ ಕ್ರಮಗಳ ಅಳವಡಿಕೆ, ನೀರಿನ ವೆಜ್ಞಾನಿಕ ಮತ್ತುಪರಿಣಾಮಕಾರಿ ನಿರ್ವಹಣೆ, ಹೀಗೆ ಹತ್ತುಹಲವು ಯೋಜನೆಗಳನ್ನ ರೈತರ ಕಲ್ಯಾಣಕ್ಕಾಗಿ ಮಾಡುತ್ತಿದೆ. ಇವುಗಳನ್ನ ಎಲ್ಲ ರೈತರು ಸದುಪಯೋಗ ಮಾಡಿಕೊಂಡು,  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

 

ವರದಿ: ವನಿತಾ ಪರಸನ್ನವರ್

 

#horticulture  #horticulturecrops  #horticultureprofit  #govtschemes  #govtschemes  #agriculturaldepartment  



Blog




Home    |   About Us    |   Contact    |   
microbi.tv | Powered by Ocat Online Advertising Service in India