ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದ ಕೃಷಿಕ ಹನುಮಂತ ಅವರು, ತಮ್ಮ ಒಂದು ಎಕರೆ ಕಬ್ಬಿನ ತೋಟದಲ್ಲಿ ಹತ್ತು ಅಡಿ ಅಂತರ ಕಾಯ್ದುಕೊಂಡು ಉತ್ತಮ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ.
ಕಬ್ಬಿನಲ್ಲಿ ಹತ್ತು ಅಡಿ ಮಹತ್ವ:
ಬೆಳೆಯ ಮಧ್ಯ ಅಂತರ ಹೆಚ್ಚಿಸಿದಂತೆ ಬೆಳೆಗೆ ಹೆಚ್ಚು ಗಾಳಿ, ಬೆಳಕು ಸರಾಗವಾಗಿ ದೊರೆಯುತ್ತದೆ. ಇದರಿಂದ ಕಬ್ಬು ಬೆಳೆಗೆ ಯಾವುದೇ ಕೀಟಬಾಧೆ, ರೋಗಗಳು ಹತ್ತಿರಕ್ಕೂ ಸುಳಿಯುವುದಿಲ್ಲ. ಇದಷ್ಟೇ ಅಲ್ಲದೆ ಬೇರುಗಳು ಅಭಿವೃದ್ಧಿಯಾಗಿ, ಕಬ್ಬು ಗಣಿಕೆ, ಮರಿಗಳ ಸಂಖ್ಯೆ ಹೆಚ್ಚಾಗುತ್ತವೆ.
ಕೀಟ ಮತ್ತು ರೋಗಬಾಧೆ ನಿಯಂತ್ರಣಕ್ಕೆ 10 ಅಡಿ ಅಂತರ..!
ಕಬ್ಬು ಬೆಳೆಯ ಮಧ್ಯ ಅಂತರ ಕಡಿಮೆ ಕೊಟ್ಟಾಗ, ಬೆಳೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಶುರುವಾಗುತ್ತದೆ. ಯಾಕಂದ್ರೆ ಅಂತರ ಕಡಿಮೆಯಿದ್ದಾಗ ತೋಟದಲ್ಲಿ ಗಾಳಿ ಮತ್ತು ಬೆಳಕಿನ ಪ್ರಮಾಣ ಕಡಿಮೆಯಾಗಿ, ಕತ್ತಲೆಯ ವಾತಾವರಣ ಸೃಷ್ಟಿಯಾಗುತ್ತದೆ. ಆಗ ಕೀಟ ಮತ್ತು ರೋಗಗಳು ಬೆಳೆಗೆ ಬಾಧಿಸಲು ಶುರುಮಾಡುತ್ತದೆ. ಹಾಗಾಗಿ ಬೆಳೆಯ ಮಧ್ಯ ಉತ್ತಮ ಅಂತರ ಕಾಯ್ದುಕೊಂಡಾಗ ಇಂತಹ ಸಮಸ್ಯೆಗಳಿಂದ ರೈತರು ದೂರವಿರಬಹುದು.
ಕಬ್ಬಿನಲ್ಲಿ ಅಂತರ ಬೆಳೆ:
ಕೃಷಿಕರು ಕಬ್ಬಿನ ಮಧ್ಯ ಅಂತರ ಹೆಚ್ಚಿಸಿದಾಗ, ಅಂತರ ಬೆಳೆಗಳನ್ನ ಬೆಳೆದು ಖಜಾನೆ ತುಂಬಿಸಿಕೊಳ್ಳಲು ಮತ್ತೊಂದು ಮಾರ್ಗವಿದು. ಹೌದು ಹತ್ತು ಅಡಿ ಅಂತರದಲ್ಲಿ ಅಲ್ಪಾವಧಿ ಬೆಳೆಗಳನ್ನ ಬೆಳೆಯೋದರಿಂದ ರೈತರು ಕಬ್ಬಿಗೆ ಮಾಡಿದ ಖರ್ಚನ್ನ ಅಲ್ಪಾವಧಿ ಬೆಳೆಯ ಮೂಲಕ ಪಡೆಯಬಹುದು. ನಂತರ ಕಬ್ಬಿನಿಂದ ಬಂದ ಹಣ ರೈತನಿಗೆ ಬೋನಸ್ ಆಗಿರುತ್ತದೆ.
ಅಂತರ ಬೆಳೆಯಾಗಿ ದ್ವಿದಳ ಧಾನ್ಯ :
ಕೃಷಿಕರು ಅಂತರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನ ಆಯ್ಕೆ ಮಾಡಿಕೊಂಡರೆ, ಮುಖ್ಯ ಬೆಳೆಗೆ ಸಾಕಷ್ಟು ಅನುಕೂಲಗಳಿವೆ. ಅವು ಯಾವುವು ಅಂದರೆ, ವಾತಾರವಣದಲ್ಲಿನ ಸಾರಜನಕವನ್ನ ದ್ವಿದಳ ಧಾನ್ಯದಲ್ಲಿನ ರೈಜೋಬಿಯಮ್ ಗಂಟುಗಳು ಸ್ಥಿರೀಕರಿಸಿ ಮುಖ್ಯ ಬೆಳೆಗೆ ಸಾರಜನಕದ ಕೊರತೆ ನೀಗಿಸುತ್ತದೆ.
ದ್ವಿದಳ ಧಾನ್ಯ ಬೆಳೆ ಹೆಚ್ಚು ಎಲೆ, ರೆಂಬೆ, ಕೊಂಬೆ, ಕಾಂಡ ಬೇರುಗಳನ್ನ ಹೊಂದಿರುವ ಕಾರಣ, ಬೆಳೆ ಕಟಾವಾದ ನಂತರ ತೋಟಕ್ಕೆ ಹೆಚ್ಚು ಸಾವಯವ ತ್ಯಾಜ್ಯ ಸಿಗುತ್ತದೆ. ದ್ವಿದಳ ಧಾನ್ಯದ ಬೇರುಗಳು, ಏಕದಳ ಧಾನ್ಯಕ್ಕಿಂತ ಭೂಮಿಯ ಆಳಕ್ಕೆ ಇಳಿಯುತ್ತವೆ. ಇದರಿಂದ ಮಣ್ಣು ಸಡಿಲವಾಗಿ ಮಣ್ಣಿನ ಆಳಕ್ಕೆ ಗಾಳಿ, ಬೆಳಕು ಸರಾಗವಾಗಿ ಹರಿಯುತ್ತದೆ. ಇದರಿಂದ ಮುಖ್ಯ ಬೆಳೆಯ ಬೇರುಗಳಿಗೂ ಹೆಚ್ಚು ಅನುಕೂಲವಾಗಲಿದೆ.
10 ಅಡಿ ಅಂತರದಿಂದ ಇಳುವರಿಯಲ್ಲಿ ಬದಲಾವಣೆ:
ತೋಟದಲ್ಲಿ ಗಾಳಿ, ಬೆಳಕು ಸರಾಗವಾಗಿ ಹರಿದಾಡುವುದರಿಂದ ಬೆಳೆ ತನ್ನ ಭೂಮಿಯಲ್ಲಿ ಸಿಕ್ಕ ಪೋಷಕಾಂಶವನ್ನ ಸಮರ್ಪಕವಾಗಿ ಉಪಯೋಗಿಸಿಕೊಂಡು, ಆಹಾರ ತಯಾರಿಸುತ್ತವೆ. ಹೀಗಾಗಿ ಕಬ್ಬು ಹೆಚ್ಚು ಗಣಿಕೆ, ಮರಿಗಳನ್ನ ನೀಡಲು ಶಕ್ತವಾಗುತ್ತದೆ. ಇಲ್ಲಿ ಮತ್ತೊಂದು ವಿಶೇಷ ಅಂದ್ರೆ, ಮರಿಗಳಿಗೆ ಸಮರ್ಪಕಪ ಪೋಷಕಾಂಶ ದೊರೆಯುವುದರಿಂದ ಮರಿಗಳು ಸಹಿತ ಸದೃಢವಾಗಿ ಬೆಳೆಯುತ್ತವೆ. ಒಟ್ಟಿನಲ್ಲಿ 10 ಅಡಿ ಅಂತರದಿಂದ ಕಬ್ಬಿನಲ್ಲಿ ಇಳುವರಿಗೆ ಮೋಸವಿಲ್ಲ ಎಂಬುವುದಕ್ಕೆ, ಈ ಕೃಷಿಕನ ತೋಟವೇ ಸಾಕ್ಷಿ.
ಇನ್ನು ಹೆಚ್ಚು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=vTmqo-TqC3Q