ಮಳೆಯಾಶ್ರಿತ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಅದೆ ರೀತಿಯಾಗಿ ಕೆಲವು ಬ್ಯಾಂಕ್ ಗಳು ಸಹಿತ, ರೈತರಿಗೆ ಸಾಲದ ರೂಪದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಹೆಗಲು ಕೊಟ್ಟು ನಿಂತಿವೆ.
ಮಳೆಯಾಧಾರಿತ ಕೃಷಿ ಮಾಡುತ್ತಿರುವವರಿಗೆ ನೀರಿನ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆಯ ಯೋಜನೆಯಡಿ ಸಹಾಯಧನದೊಂದಿಗೆ ಜಾರಿಯಾಗಿರುವ ಕೃಷಿ ಹೊಂಡ ನಿರ್ಮಾಣ ರೈತರಿಗೆ ವರದಾನವಾಗಲಿದೆ. ತಮ್ಮ ಜಮೀನಿನಲ್ಲಿ ಅನುಕೂಲಕ್ಕೆ ತಕ್ಕಂತೆ ಇಲಾಖೆ ನಿಗದಿ ಪಡಿಸಿದ ರೂಪದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸಬ್ಸಿಡಿ ಸಹಿತ ಅನುದಾನ ಸಿಗುತ್ತದೆ.
ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿರುವ ಮಳೆಯ ಪ್ರಮಾಣದಿಂದ ಮಳೆಯಾಧಾರಿತ ಕೃಷಿಯನ್ನು ನಂಬಿಕೊಂಡಿರುವ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಹೊಂಡ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕೃಷಿಕರು ಮಳೆ ನೀರನ್ನು ವ್ಯರ್ಥವಾಗಲು ಬಿಡದೆ ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ, ಅದನ್ನು ತಮ್ಮ ಬೆಳೆಗಳಿಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಕೃಷಿ ಹೊಂಡ ರಚನೆ ನಂತರ ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್ ಪಂಪ್‌ಸೆಟ್, ತುಂತುರು ನೀರಾವರಿ ಅಳವಡಿಕೆಗೆ ಈ ಯೋಜನೆಯಡಿ ಅವಕಾಶವಿದೆ. ಕೃಷಿ ಹೊಂಡ ನಿರ್ಮಾಣ ಮಾಡಿದ ರೈತರಿಗೆ ಅಳತೆಗೆ ಅನುಗುಣವಾಗಿ ಸಾಮಾನ್ಯ ವರ್ಗದವರಿಗೆ ಸಹಾಯಧನ (ಸಬ್ಸಿಡಿ) ನೀಡಲಾಗುವುದು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಕೊಳವೆ ಬಾವಿ ಮರುಪೂರಣ ಘಟಕ, ಈರುಳ್ಳಿ ಶೇಖರಣೆ ಘಟಕ, ಕೃಷಿ ಹೊಂಡ, ವೈಯಕ್ತಿಕ ಪೌಷ್ಠಿಕ ತೋಟಗಳ ನಿರ್ಮಾಣಕ್ಕಾಗಿ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ತೋಟಗಾರಿಕೆ ಇಲಾಖೆ ನಿರ್ದಿಷ್ಟ ಸಮಯದಲ್ಲಿ ಅರ್ಜಿ ಆಹ್ವಾನಿಸುತ್ತದೆ.
ಸಹಾಯಧನ ಸೌಲಭ್ಯವಿರುವ ಕಾರಣ ಕ್ರಿಯಾ ಯೋಜನೆಯಡಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-278179 ಹಾಗೂ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸ ಬಹುದಾಗಿದೆ.
ಈ ನಿಟ್ಟಿನಲ್ಲಿ ರೈತರ ಬೆನ್ನಿಗೆ ನಿಂತಿರುವ ಬ್ಯಾಂಕ್ ಗಳಾದ ಭಾರತಿಯ ಸ್ಟೇಟ್ ಬ್ಯಾಂಕ್, ನಬಾರ್ಡ್ , ಕೆಎಫ್ ಪಿಒ ಹಾಗೂ ದೇಶಪಾಂಡೆ ಫೌಂಡೇಶನ್ ಸಹಯೋಗದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸುಮಾರು ಒಂದು ಲಕ್ಷ ಕೃಷಿ ಹೊಂಡಗಳ ನಿರ್ಮಾಣ ನಿಟ್ಟಿನಲ್ಲಿ ರೈತರಿಗೆ ನೆರವಿನ ಘೋಷಣೆ ಮಾಡಲಾಗಿದೆ, ರೈತರಿಗೆ 1 ಲಕ್ಷ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಾಲ ನೀಡಲು ಬ್ಯಾಂಕ್ ಸಿದ್ಧವಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಳಕೆ ಮುಂದಾಗಬೇಕು,
ಕೃಷಿ ಹೊಂಡ ನಿರ್ಮಿಸಿಲು ರೈತರಿಗೆ ಒಟ್ಟು 80 ಸಾವಿರ ರೂ. ಖರ್ಚಾಗುತ್ತೆ, ಅದರಲ್ಲಿ 60 ಸಾವಿರ ರೂ.ಗಳನ್ನ ಎಸ್ ಬಿಐ ಬ್ಯಾಂಕ್ ಸಾಲದ ರೂಪದಲ್ಲಿ ರೈತರಿಗೆ ನೀಡುತ್ತದೆ. ಉಳಿದ 20 ಸಾವಿರ ರೂ.ಗಳನ್ನ ರೈತರೇ ಭರಿಸಬೇಕು. ಈ ಸಾಲವನ್ನ ಜಂಟಿ ಹೊಣೆಗಾರಿಕೆ ಮಾದರಿ ರೀತಿಯಲ್ಲಿ ನೀಡಲಾಗುತ್ತದೆ.
ರೈತಬಾಂಧವರೆ ಇಂತಹ ಸೌಲಭ್ಯಗಳನ್ನ ಬಳಸಿಕೊಂಡು ಕೃಷಿ ಹೊಂಡಗಳನ್ನ ನಿರ್ಮಿಸಿಕೊಂಡರೆ, ಬೇಸಿಗೆ ಕಾಲದ ಬೆಳೆಗಳಿಗೆ ಮಳೆರಾಯನನ್ನ ಕಾಯುತ್ತ ಕೂರುವ ಅವಶ್ಯಕತೆಯೇ ಬರುವುದಿಲ್ಲ, ನೀವು ಬೆಳೆದಿರುವ ಬೆಳೆಗಳಿಗೆ ನೀರಿನ ಸಮಸ್ಯೆ, ಕೊರತೆಗಳು ಕಾಡುವುದಿಲ್ಲ, ಹಾಗಾಗಿ ಎಲ್ಲ ರೈತರು ಇಂತಹ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಿ .
ಬರಹ: ವನಿತಾ ಪರಸಣ್ಣವರ್
https://www.youtube.com/watch?v=JeZM7Lkyt8M&t=36s