ಕೊಪ್ಪಳ ತಾಲೂಕಿನ ಕೃಷಿಕರಾದ ನಾಗರಾಜ ಅವರು, ತಮ್ಮ ಶೇಂಗಾ ಮತ್ತು ತೊಗರಿ ಬೆಳೆಯನ್ನ ಮಳೆಯಾಶ್ರಿತದಲ್ಲಿ ಬೆಳೆಯುತ್ತಿದ್ದಾರೆ. ಆದ್ರೆ ಇಲ್ಲಿ ಆಶ್ಚರ್ಯ ಮತ್ತು ದುರಂತದ ಸಂಗತಿ ಅಂದ್ರೆ, ಮಳೆರಾಯ ಮುನಿಸಿಕೊಂಡು, ಅಪರೂಪಕ್ಕೆ ದರ್ಶನ ನೀಡುತ್ತಿದ್ದ. ಇದಷ್ಟೆ ಅಲ್ಲದೆ ಬಿದ್ದ ಮಳೆ, ಬೆಳೆ ಮತ್ತು ಭೂಮಿಗೆ ಸಾಕಾಗುತ್ತಿರಲಿಲ್ಲ. ಆದ್ರೆ ನಾಗರಾಜ್ ಅವರ ಶೇಂಗಾ ಮತ್ತು ತೊಗರಿಗೆ ನೀರಿನ ಅಭಾವ ಆಗಲಿಲ್ಲ ಯಾಕೆ ಗೊತ್ತಾ?
ಸಾವಯವ ಕೃಷಿಯಿಂದಲೇ ಬೆಳೆಗೆ ಸಿಕ್ತು ಗಂಗಾಜಲ..!
ಕೃಷಿಕ ನಾಗರಾಜ್ ಅವರು ಸಾವಯವ ಕೃಷಿಯಲ್ಲಿ ತೊಗರಿ ಮತ್ತು ಶೇಂಗಾ ಬೆಳೆ ನಿರ್ವಹಣೆ ಮಾಡುತ್ತಿದ್ದರಿಂದ ಬೆಳೆಗೆ ನೀರಿನ ಕೊರತೆಯಾಗಲಿಲ್ಲ. ಯಾಕಂದ್ರೆ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚಾಗ್ತಿದ್ದಂತೆ ಎರೆಹುಳುಗಳ ಸಂಖ್ಯೆ ಹೆಚ್ಚಾಯ್ತು. ಆನಂತರ ಮಣ್ಣಿನಲ್ಲಿ ಸಣ್ಣ ರಂಧ್ರಗಳು ಮತ್ತು ದೊಡ್ಡ ರಂಧ್ರಗಳು ಹೆಚ್ಚಾದವು. ಸಣ್ಣ ರಂಧ್ರಗಳು ಮಣ್ಣಿನಲ್ಲಿ ನೀರನ್ನ ಹಿಡಿದಿಟ್ಟುಕೊಳ್ಳುತ್ತವೆ, ದೊಡ್ಡ ರಂಧ್ರಗಳು ಗಾಳಿಯ ಸರಬರಾಜಿಗೆ ಮಾರ್ಗವಾಗಿ ಪರಿಣಮಿಸುತ್ತವೆ.
ದ್ವಿದಳ ಧಾನ್ಯದಲ್ಲಿ ರೈಜೋಬಿಯಮ್ ಗುರುತಿಸುವುದು ಹೇಗೆ?
ಬೇರಿನಲ್ಲಿ ಅಪಕಾರಿ ಗಂಟು ಮತ್ತು ಉಪಕಾರಿ ಗಂಟುಗಳು ಇರುತ್ತವೆ. ಅಪಕಾರಿ ಗಂಟುಗಳು ಅಂದ್ರೆ ನೆಮಟೋಡ್(ಜಂತು ಹುಳ), ಉಪಕಾರಿ ಗಂಟುಗಳು ಅಂದ್ರೆ, ರೈಜೋಬಿಯಮ್.
ರೈಜೋಬಿಯಮ್ ಗಂಟುಗಳನ್ನ ಮುಟ್ಟಿದರೆ ಮೃದುವಾಗಿರುತ್ತವೆ. ಒಂದು ವೇಳೆ ಗಂಟುಗಳನ್ನ ಕಿತ್ತರೆ ಸರಳವಾಗಿ ಬೇರಿನಿಂದ ಬೇರ್ಪಡುತ್ತವೆ. ಆದ್ರೆ ನೆಮಟೋಡ್ ಹಾಗಲ್ಲ. ಗಟ್ಟಿಯಾದ ಗಂಟುಗಳು ಇದ್ದು, ಕಿತ್ತರೆ ಅಷ್ಟು ಸರಳವಾಗಿ ಬೇರಿನಿಂದ ಬೇರ್ಪಡುವುದಿಲ್ಲ, ಜತೆಗೆ ಬೇರಿಗೆ ತೊಂದರೆ ನೀಡುತ್ತಿರುತ್ತವೆ.
ರೈಜೋಬಿಯಮ್ ಗಂಟುಗಳ ಕೆಲಸ:
ವಾತಾವರಣದಲ್ಲಿ ಅಗಾಧ ಪ್ರಮಾಣದಲ್ಲಿ ಸಾರಜನಕವಿದೆ. ಆದ್ರೆ ಅದು ಬೆಳೆಗೆ ಲಭ್ಯವಾಗುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ರೈಜೋಬಿಯಮ್ ಸೂಕ್ಷ್ಮಾಣು ಜೀವಿಗಳು ವಾತಾವರಣದಲ್ಲಿರುವ ಸಾರಜನಕವನ್ನ ಸ್ಥಿರೀಕರಿಸಿ ಬೆಳೆಗಳಿಗೆ ಒದಗಿಸುತ್ತವೆ. ಇದರ ಜತೆಗೆ ರೈಜೋಬಿಯಮ್ ಗಂಟು ಹೆಚ್ಚಾದ್ರೆ, ನೆಮಟೊಡ್ ಗಂಟುಗಳಿಗೆ ಜಾಗ ಸಿಗುವುದಿಲ್ಲ. ಇಂತಹ ಚಮತ್ಕಾರ ನಡೆಯಲು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ.
ಕೃಷಿಕ ನಾಗರಾಜ ಅವರ ತೋಟದಲ್ಲಿನ ತೊಗರಿ ಮತ್ತು ಶೇಂಗಾ ಬೇರಿನಲ್ಲಿ, ರೈಜೋಬಿಯಮ್ ಗಂಟುಗಳು ಹೆಚ್ಚಾಗಿದ್ದರ ಬೆನ್ನಲ್ಲೆ, ಸಾರಜನಕದ ಕೊರತೆಯಿಲ್ಲದೆ ಬೆಳೆ ಹಸಿರಾಗಿದೆ.
ಒಟ್ಟಿನಲ್ಲಿ ಕೃಷಿಕ ತಮ್ಮ ತೋಟದಲ್ಲಿ, ರಾಸಾಯನಿಕ ಗೊಬ್ಬರ ಬಳಸದೆ, ಸಾವಯವ ಕೃಷಿ ಅನುಸರಿಸಿದ್ದರಿಂದ ಇಂದು ಬೆಳೆ ನೀರಿನ ಕೊರತೆಯಿಲ್ಲದೆ ಅದ್ಭುತವಾಗಿ ಬೆಳೆದು ಬಂದಿದೆ.
https://www.youtube.com/watch?v=fJ4qA1D-gkE&t=320s