Blog

       ಡಿಸೆಂಬರ್ 2-3-1984 ರ ಮಧ್ಯರಾತ್ರಿ. ವಿಶ್ವ ಕಂಡ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ ಭೋಪಾಲ್ ಅನಿಲ ದುರಂತ ನಡೆದ ದಿನ. ನಿದ್ದೆಯಲ್ಲಿದ್ದ ಎಷ್ಟೋ ಜನ ಚಿರನಿದ್ರೆಗೆ ಜಾರಿದ ಕರಾಳ ರಾತ್ರಿ. ಸಾವಿರಾರು ಜನ ಉಸಿರುಕಟ್ಟಿ ಪ್ರಾಣ ಬಿಟ್ಟ ದಿನ. ಕೆಲವರ ದುರಾಸೆ, ಬೇಜವಾಬ್ದಾರಿತನಕ್ಕೆ ಹಸುಗೂಸು, ಮಕ್ಕಳು, ವೃದ್ಧರು ಉಸಿರುಕಟ್ಟಿ ನರಳಿ ನರಳಿ ಪ್ರಾಣತೆತ್ತ ದಿನ. ‘ದಿ ಅಟ್ಲಾಂಟಿಕ್’ ಎಂಬ ಅಮೇರಿಕಾದ ಮ್ಯಾಗಜಿನ್ ಇದನ್ನು “world’s worst industrial disaster” ಎಂದು ಬರೆದಿದೆ.

 

ಭೋಪಾಲ್ ಅನಿಲ ದುರಂತ

       ಡಿಸೆಂಬರ್ 2-3ರ ಮಧ್ಯರಾತ್ರಿ ಸುಮಾರು 40-45 ಟನ್ ಮಿಥೈಲ್ ಐಸೋಸೈನೇಟ್(MIC)ಎಂಬ ವಿಷಾನಿಲ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್(UCIL)ನ ಕೀಟನಾಶಕ ಕಾರ್ಖಾನೆಯಿಂದ ಗಾಳಿಯಲ್ಲಿ ಹರಡಿತ್ತು. ಇದರ ಪರಿಣಾಮ ಸುಮಾರು 25,000 ಜನರ ಮಾರಣಹೋಮ ನಡೆಯಿತು. 5 ಲಕ್ಷಕ್ಕೂ ಹೆಚ್ಚು ಜನರು MIC ಪರಿಣಾಮವಾಗಿ ಅನೇಕ ರೋಗ, ಅಂಗ ವೈಫಲ್ಯಗಳಿಗೆ ತುತ್ತಾಗಿದ್ದಾರೆ. ಇಷ್ಟೇ ಅಲ್ಲದೇ ಸತ್ತ ಜನನ ಪ್ರಮಾಣ(stillbirth rate) ಮತ್ತು ನವಜಾತ ಶಿಶುಗಳ ಮರಣ ಪ್ರಮಾಣವು ಕ್ರಮವಾಗಿ 300% ಮತ್ತು  200% ವರೆಗೆ ಹೆಚ್ಚಾಗಿದೆ. ವಿಷಾನಿಲದ ಪರಿಣಾಮವಾಗಿ ನೀರು ಮತ್ತು ಮಣ್ಣಿನ ಮಾಲಿನ್ಯವಾಗಿದೆ. ಇಂದಿಗೂ ಅಲ್ಲಿನ ಜನರು ಇವುಗಳ ಬಳಕೆಯಿಂದ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ದುರಂತ ಅಲ್ಲಿ ಹುಟ್ಟುವ, ಬದುಕುತ್ತಿರುವ ಜನರನ್ನು ಇನ್ನೂ ಕಾಡುತ್ತಿದೆ. ಈ ಕರಾಳ ದಿನವನ್ನು 1984ರಲ್ಲಿ ಭೋಪಾಲ್ ಅನಿಲ ದುರಂತದಲ್ಲಿ ಪ್ರಾಣ ಕಳೆದುಕೊಂಡ ಸಾವಿರಾರು ಜನರನ್ನು ಸ್ಮರಿಸಲು ಮತ್ತು ಹೆಚ್ಚುತ್ತಿರುವ ಮಾಲಿನ್ಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 2ರಂದು ಭಾರತದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಆಚರಿಸಲಾಗುತ್ತದೆ.

       ಕೀಟನಾಶಕ, ರಾಸಾಯನಿಕಗಳ ತಯಾರಿಕೆಯ ಪರಿಣಾಮವಾಗಿ ಅನೇಕ ದುರಂತಗಳು ನಡೆದಿವೆ. ಅಮಾಯಕರ ಸಾವಿಗೆ ಕಾರಣವಾಗಿವೆ. ಕೃಷಿಯಲ್ಲಿ ಬಳಸುವ ರಾಸಾಯನಿಕಗಳ ಪರಿಣಾಮವಾಗಿ ಮಣ್ಣನ್ನು ಹಾಳು ಮಾಡಿಕೊಳ್ಳುವುದರ ಜತೆಗೆ ರಾಸಾಯನಿಕ ತಯಾರಿಕೆಯಲ್ಲೂ ಇಂಥ ಅವಗಢಗಳು ಸಂಭವಿಸುವುದರಿಂದ ಜೀವಹಾನಿ, ಮಾಲಿನ್ಯತೆ ಹೆಚ್ಚುತ್ತಿದೆ. ಸುರಕ್ಷಾ ಕ್ರಮಗಳನ್ನು ಕಡೆಗಣಿಸಿ ಹಣದಾಸೆಗೆ ಬೇಜವಾಬ್ದಾರಿ ಕಂಪನಿಗಳಿಗೆ ಅನುಮತಿ ನೀಡುವ ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ದುಡ್ಡು ಮಾಡುತ್ತಾರೆ. ಉದ್ಯೋಗಾವಕಾಶದ ಆಸೆ ಹುಟ್ಟಿಸಿ ಅಮಾಯಕರ ಬಲಿ ಪಡೆಯುತ್ತಿರುವುದು ಸುಳ್ಳಲ್ಲ.

       ಗೊತ್ತೋ ಗೊತ್ತಿಲ್ಲದೆಯೋ, ದೇಶದ ಬೆನ್ನೆಲುಬು, ದೇಶದ ಅನ್ನದಾತನಾಗಿರುವ ರೈತನ ಕೈಗಳಿಂದಲೇ ಜನಸಾಮಾನ್ಯರಿಗೆ ವಿಷವುಣಿಸುವ ಕೆಲಸ ನಡೆಯುತ್ತಿದೆ. ಇಂತಹ ವಿಷಗಳನ್ನು ಬಳಸುವ ಬದಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರ ಆರೋಗ್ಯ, ದೇಶದ ಜನರ ಆರೋಗ್ಯ ಕಾಪಾಡಬಹುದು. ಒಂದು ದೇಶದ ಆರೋಗ್ಯ ರೈತರ ಮೇಲೆ ಅವಲಂಬಿತವಾಗಿದೆ ಎಂದರೆ ಬಹುಶಃ ತಪ್ಪಾಗಲಾರದು. ಆರೋಗ್ಯ ವಲಯಕ್ಕೋಸ್ಕರ ಸರ್ಕಾರಗಳು ಖರ್ಚು ಮಾಡುವ ಎಷ್ಟೋ ಹಣ ಉಳಿಸಬಹುದು. ವಾತಾವರಣವನ್ನು ಮಲಿನ ಮಾಡಿ, ಎಲ್ಲಾ ಕೈ ಮೀರಿದ ಮೇಲೆ ಭೂಮಿಯನ್ನ ಮಲಿನ ಮುಕ್ತ ಮಾಡ್ತೀವಿ, ಹವಾಮಾನ ವೈಪರೀತ್ಯಗಳ ಹತೋಟಿ ಮಾಡ್ತೀವಿ ಅಂತ ಹೇಳಿ ಸಾವಿರಾರು ಕೋಟಿ ಹಣ ಮಂಜೂರು ಮಾಡಿ, ಅದರಲ್ಲೂ ಕೊಳ್ಳೆ ಹೊಡೆಯುವ ಬೂಟಾಟಿಕೆಯನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದೇನೋ. ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸುವುದರ ಬಗ್ಗೆ ಮಾತಾಡ್ತಿವಿ, ಆಸ್ತಿ ಮಾಡೋದರ ಬಗ್ಗೆ ಮಾತಾಡೋ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ವಿಷಮುಕ್ತ ಆಹಾರ, ಶುದ್ಧ ಗಾಳಿ, ಶುದ್ಧ ನೀರು, ಮಲಿನಮುಕ್ತ ವಾತಾವರಣವನ್ನು ಮುಂದಿನ ಪೀಳಿಗೆಗೆ ಕೊಡುವುದೇ ಅತ್ಯಂತ ದೊಡ್ಡ ಆಸ್ತಿ.

 

ಬರಹ: ರವಿಕುಮಾರ್

 

https://www.youtube.com/watch?v=hADjOyPXAtw&t=115s

 

#kannadablog  #drsoil  #microbiagrotech  #agricultureblogs  #agricultureinkannada  #organicfarming  #bhopalgastragedy  #industrialdisaster  #gasleaktragedy  



Blog




Home    |   About Us    |   Contact    |   
microbi.tv | Powered by Ocat Online Advertising Service in India