Blog

       ಒಂದು ಬೆಳೆ ಸಮೃದ್ಧವಾಗಿ ಬೆಳೆಯಲು ಗಾಳಿ, ಬೆಳಕು, ನೀರು ಮತ್ತು ಆಹಾರ ತುಂಬಾ ಮುಖ್ಯ. ಆದರೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಇವುಗಳ ಸದ್ಬಳಕೆಯಾಗುತ್ತಿಲ್ಲ. ಆದ ಕಾರಣ ಎಕರೆಗೆ ಕೇವಲ 40 ರಿಂದ 50 ಟನ್ ಮಾತ್ರ ಇಳುವರಿ ಪಡೆಯುತ್ತಿದ್ದಾರೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿದರೆ, ಕಬ್ಬಿನಲ್ಲಿ 100 ಟನ್  ಇಳುವರಿಯನ್ನು ಸುಲಭವಾಗಿ ಪಡೆಯಬಹುದು. ಇಳುವರಿ ಹೆಚ್ಚಿಸಲು, ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲು, ಅಂತರ ಪ್ರಮುಖ ಪಾತ್ರ ವಹಿಸುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಆರ್. ಹುಲ್ಲುನಾಚೇಗೌಡರವರು ಹುಟ್ಟು ಹಾಕಿರುವ ಪದ್ಧತಿಯೇ 10 x 10 ಜೋಡಿ ಸಾಲು ಪದ್ಧತಿ.

 

10 x 10 ಜೋಡಿ ಸಾಲು ಪದ್ಧತಿ ಎಂದರೇನು?

       ಈ ಪದ್ಧತಿಯ ಪ್ರಕಾರ ಭೂಮಿಯನ್ನು ಸಿದ್ಧತೆ ಮಾಡಿಕೊಂಡು, ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 10 ಅಡಿ ಅಂತರ ಕೊಡಬೇಕು ಮತ್ತು ಪ್ರತಿ ಸಾಲಿನಲ್ಲೂ ಜಿಗ್ ಜಾಗ್ ಮಾದರಿಯಲ್ಲಿ ಒಂದು ಕಣ್ಣಿನಿಂದ ಇನ್ನೊಂದು ಕಣ್ಣಿಗೆ 3 ಅಡಿ ಅಂತರದಂತೆ ಜೋಡಿ ಸಾಲಿನಲ್ಲಿ ನಾಟಿ ಮಾಡುವುದರಿಂದ, ಕೃಷಿಗೆ ಸಂಬಂಧಪಟ್ಟ ಎಲ್ಲಾ ಸಂಪನ್ಮೂಲಗಳು ಸದ್ಭಳಕೆಯಾಗಿ, ಉತ್ತಮ ಇಳುವರಿ ಪಡೆಯಬಹುದಾಗಿದೆ. ಈಗಿನ ಕೃಷಿ ಪದ್ಧತಿಯಲ್ಲಿ 3 x 3 ಅಥವಾ ಅದಕ್ಕಿಂತಲೂ ಕಡಿಮೆ ಅಂತರವನ್ನು ಪಾಲಿಸುತ್ತಿದ್ದಾರೆ. ಆದ ಕಾರಣ ಬೆಳೆಗೆ ಗಾಳಿ, ಬೆಳಕು ಸರಿಯಾಗಿ ಪೂರೈಕೆಯಾಗದೆ ನೀರು ಮತ್ತು ಆಹಾರಕ್ಕೆ ಸ್ಪರ್ಧೆ ಏರ್ಪಟ್ಟು ಇಳುವರಿಯು ಕುಂಠಿತವಾಗುತ್ತಿದೆ. ಅಂತರವನ್ನು ಹೆಚ್ಚಿಸಿಕೊಂಡಾಗ ಕಡಿಮೆ ಗಿಡಗಳಿಂದಲೇ ದುಪ್ಪಟ್ಟು ಇಳುವರಿಯನ್ನು ಪಡೆಯಬಹುದು. ಇದರ ಜೊತೆಗೆ 10 x 10 ಅಂತರವನ್ನು ಕೊಡುವುದರಿಂದ ಮಧ್ಯದಲ್ಲಿ ಇರುವಂತಹ ಖಾಲಿ ಜಾಗದಲ್ಲಿ ಅಂತರಬೆಳೆಗಳನ್ನು ಬೆಳೆದುಕೊಂಡು ರೈತರು ಹೆಚ್ಚು ಆದಾಯ ಪಡೆಯಬಹುದು. ಅಲ್ಪಾವಧಿ ಬೆಳೆಗಳಾದ ದ್ವಿದಳ ಧಾನ್ಯಗಳು, ಮೆಣಸಿನಕಾಯಿ, ಚೆಂಡು ಹೂ, ಸೇವಂತಿಗೆ ಇತ್ಯಾದಿ ಬೆಳೆಗಳನ್ನು ಬೆಳೆಯಬಹುದು. ಈ ರೀತಿಯಾದಂತಹ 3 ಬೆಳೆಗಳನ್ನು ಕಬ್ಬಿನ ಅವಧಿ ಮುಗಿಯುವವರೆಗೂ ಬೆಳೆದು ಆದಾಯವನ್ನು ಸುಧೀರ್ಘವಾಗಿ ಪಡೆಯಬಹುದು. ಸಾಮಾನ್ಯವಾಗಿ ಕಡಿಮೆ ಅಂತರ ಕೊಟ್ಟಾಗ 3-4 ಕೂಳೆ ಬೆಳೆಗಳನ್ನು ಮಾತ್ರ ಬೆಳೆಯಬಹುದು. ಆದರೆ 10 ಜೋಡಿ ಸಾಲು ಪದ್ಧತಿ ಅಳವಡಿಸಿಕೊಂಡಾಗ 10-15 ಕೂಳೆ ಬೆಳೆಗಳನ್ನು ಬೆಳೆಯಬಹುದು.

 

ಹನುಮಂತ್ ಅವರ ಪ್ರಯೋಗ..!

       ಮೈಕ್ರೋಬಿ ಆಗ್ರೋಟೆಕ್ ಸಂಸ್ಥೆಯ ಪ್ರತಿನಿಧಿಯಾದ ಹನುಮಂತ್ ರವರು ಗದಗ ಜಿಲ್ಲೆ ಗಜೇಂದ್ರಗಢ ತಾಲೂಕಿನ ಕೃಷಿ ಕುಟುಂಬಕ್ಕೆ ಸೇರಿದವರು. ಅವರ ಮಾತಿನಲ್ಲೇ ಹೇಳುವುದಾದರೆ, ಇವರು ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ. ಕೆ.ಆರ್. ಹುಲ್ಲುನಾಚೇಗೌಡರಿಂದ ಪ್ರೇರಿತರಾಗಿ, ಅವರ ಮಾರ್ಗದರ್ಶನದಲ್ಲಿ ಸಾವಯವ ಕೃಷಿಯಲ್ಲಿ ಸಾಧನೆ ಮಾಡಬೇಕೆಂದು ಸಾವಯವ ಕೃಷಿ ಪ್ರಾರಂಭಿಸಿದರು. ಏಕಬೆಳೆ ಪದ್ಧತಿ ಅನುಸರಿಸಿದರೆ ಖರ್ಚು ಜಾಸ್ತಿ, ಆದಾಯ ಕಡಿಮೆ, ರೋಗಬಾಧೆ ಹೆಚ್ಚು ಎಂದು ಮನಗಂಡು, ಬಹುಬೆಳೆ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ 1 ಎಕರೆಯಲ್ಲಿ ಪ್ರಾಯೋಗಿಕವಾಗಿ 10 x 10 ಜೋಡಿ ಸಾಲು ಪದ್ಧತಿ ಮಾಡಿದ್ದಾರೆ. ಇದಾಗಲೇ ಅಲ್ಪಾವಧಿ ಬೆಳೆಯಿಂದ ಕೂಡ ಒಂದು ಬಾರಿ ಫಸಲು ತೆಗೆದುಕೊಂಡು ಆದಾಯ ಗಳಿಸಿದ್ದಾರೆ. 10 ಅಡಿ ಅಂತರದಿಂದ ಕಬ್ಬುಗಳೂ ಕೂಡ ದಷ್ಟವಾಗಿ, ಹೆಚ್ಚು ಮರಿಗಳು ಬಂದಿವೆ. ಖರ್ಚು ಕಡಿಮೆಯಾಗಿದೆ. ರೋಗಬಾಧೆ, ಕೀಟಬಾಧೆ ಇಲ್ಲವೇ ಇಲ್ಲ. ಈ ಬಾರಿ ಕಬ್ಬಿನಿಂದ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿದ್ದಾರೆ.

       ಈ ರೀತಿ 10 x 10 ಜೋಡಿ ಸಾಲು ಪದ್ಧತಿಯನ್ನು ಅನುಸರಿಸುವುದರಿಂದ 1 ಎಕರೆಗೆ 100 ಟನ್ ನಷ್ಟು ಇಳುವರಿ ತೆಗೆಯಬಹುದು. ಇದರ ಜತೆ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಆದಾಯ ಹೊಂದುವುದರ ಜತೆಗೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿಕೊಂಡು, ಅದರಲ್ಲಿಯೂ ಸಾವಯವ ಕೃಷಿ ಪದ್ಧತಿಯಲ್ಲಿ ವ್ಯವಸಾಯ ಮಾಡುವುದರಿಂದ ಜೈವಿಕ ಕ್ರಿಯೆ ಹೆಚ್ಚಲು ಸಹಕಾರಿಯಾಗುವ ತ್ಯಾಜ್ಯಗಳು ಯಥೇಚ್ಛವಾಗಿ ದೊರೆಯುತ್ತವೆ.

 

ಬರಹ: ರವಿಕುಮಾರ್

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://www.youtube.com/watch?v=vTmqo-TqC3Q&t=2s

 

#kannadablog  #drsoil  #microbiagrotech  #agricultureblogs  #agricultureinkannada  #integratedfarming  #sugarcane  #sugarcanefarming  #10feetsugarcanefarming  



Blog




Home    |   About Us    |   Contact    |   
microbi.tv | Powered by Ocat Online Advertising Service in India