ಕೃಷಿ ಕಾಯಕದ ಸವಾಲುಗಳಲ್ಲಿ ಕಳೆ ಕೂಡ ಒಂದು ದೊಡ್ಡ ಸವಾಲು. ಬೆಳೆಗಳ ಜತೆಗೆ ಬೆಳೆದು ಬೇಡ ಎಂದರೂ ಹೊಲಗಳಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳುತ್ತವೆ. ಇವುಗಳನ್ನು ಹೇಗಾದರು ಜಮೀನಿನಿಂದ ಓಡಿಸಲೇ ಬೇಕು ಎಂದು ನಮ್ಮ ರೈತರು, ಕಳೆನಾಶಕಗಳನ್ನು ಬಳಸಿ, ಕಳೆ ನಾಶಮಾಡುವ ಅವಸರದಲ್ಲಿ ಬೆಳೆಯನ್ನೇ ನಾಶಮಾಡಿಕೊಳ್ಳುತ್ತಾರೆ.
ಆದರೆ ರೈತರು ಅರಿತುಕೊಳ್ಳಬೇಕಾದ ಮುಖ್ಯ ವಿಷಯ, ಕಳೆ ನಮ್ಮ ಕೃಷಿ ಭೂಮಿಗೆ ಶಾಪವಲ್ಲ, ಬದಲಾಗಿ ವರದಾನ ಎಂಬ ಸತ್ಯವನ್ನ. ಕಳೆಗೆ ರಾಸಾಯನಿಕ ಕಳೆ ನಾಶಕಗಳನ್ನು ಸಿಂಪಡಣೆ ಮಾಡುವ ಬದಲು, ಸಾವಯವ ಕೃಷಿಯಲ್ಲಿ ನಿಯಂತ್ರಣ ಮಾಡಬಹುದು. ಇದರಿಂದ ನಿಮ್ಮ ಕೃಷಿ ಭೂಮಿಗೆ ಜೈವಿಕ ಗೊಬ್ಬರ ದೊರೆತಂತಾಗುತ್ತದೆ. ಹೀಗಾಗಿ ಕಳೆ ರೈತರಿಗೆ ವರದಾನ ಎಂಬುವುದರಲ್ಲಿ, ಯಾವುದೇ ಸಂಶಯ ಬೇಡ.
ಬೆಳೆ ತಿರುಗುವಿಕೆ (CROP ROTATION)
ಸಾಮಾನ್ಯವಾಗಿ ಬೆಳೆ ತಿರುಗುವಿಕೆಯಿಂದ ರೋಗ ಮತ್ತು ಕೀಟ ಬಾಧೆಯನ್ನು ನಿಯಂತ್ರಿಸಬಹುದು ಎಂಬುದು ನಮಗೆ ತಿಳಿದಿದೆ. ಆದರೆ ಬೆಳೆ ತಿರುಗುವಿಕೆಯಿಂದ ಕಳೆ ನಿಯಂತ್ರಣವನ್ನೂ ಮಾಡಬಹುದು ಎಂಬ ವಿಚಾರ ಎಷ್ಟೋ ರೈತರಿಗೆ ತಿಳಿದಿಲ್ಲ. ನಾವು ಒಂದೇ ಜಾತಿಯ ಬೆಳೆಗಳನ್ನು ಪದೇಪದೇ ಬೆಳೆಯುವುದರಿಂದ ಕಳೆಯನ್ನು ಆಹ್ವಾನಿಸಿದಂತಾಗುತ್ತದೆ. ಬೆಳೆ ಮತ್ತು ಕಳೆ ಎರಡೂ ಒಂದೇ ಜಾತಿಗೆ ಸೇರಿದ ಸಸ್ಯಗಳಾಗಿದ್ದರೆ, ಎಷ್ಟೇ ಕಳೆ ನಾಶಕಗಳನ್ನು ಸಿಂಪಡಣೆ ಮಾಡಿದರು ಪ್ರಯೋಜನ ವಿಲ್ಲ. ಮುಖ್ಯ ಬೆಳೆಯ ಜತೆಗೆ ಕಳೆಯೂ ಕೂಡ ಬೆಳೆಯಲು ಶುರು ಮಾಡುತ್ತದೆ. ಇದರಿಂದ ಭೂಮಿ ಮತ್ತು ಬೆಳೆ ನಾಶವಾಗುತ್ತದೆ ವಿನಃ ಕಳೆ ನಿಯಂತ್ರಣವಾಗುವುದಿಲ್ಲ. ಹೀಗಾಗಿ ಬೆಳೆ ತಿರುಗುವಿಕೆ ಮಾಡುವುದು ಉತ್ತಮ.
ಉಳುಮೆ:
ಮುಖ್ಯ ಬೆಳೆಗಳು ಇಲ್ಲದ ಸಂದರ್ಭದಲ್ಲಿ ಬೆಳೆದಿರುವಂತಹ ಎಲ್ಲಾ ಕಳೆಗಳನ್ನು, ಭೂಮಿಯಲ್ಲಿ ಸೇರಿಸಿ ಉಳುಮೆ ಮಾಡಬೇಕಾಗುತ್ತದೆ. ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸುವಾಗ ಡಿಕಂಪೋಸ್ ಮಾಡಿದ ಸಗಣಿ ಗೊಬ್ಬರವನ್ನು ಬಳಸುತ್ತೇವೆ. ಕೊಟ್ಟಿಗೆ ಗೊಬ್ಬರದ ಜತೆಗೆ ಕಳೆಯು ಕೂಡ ಡಿಕಂಪೋಸ್ ಆಗಿ, ಭೂಮಿಯಲ್ಲಿ ಸಾವಯವ ಇಂಗಾಲ ವೃದ್ಧಿಯಾಗುವುದು. ಹೀಗಾಗಿ ಕಳೆಯಿಂದ ಭೂಮಿಗೆ ಜೈವಿಕ ಗೊಬ್ಬರ ದೊರೆತಂತಾಗುತ್ತದೆ. ಈ ಕಾರ್ಯವನ್ನು ಮಳೆಗಾಲದಲ್ಲಿ ಮಾಡುವುದು ತುಂಬಾ ಅನುಕೂಲ. ನಂತರ ನಾವು ಯಾವುದೇ ಬೆಳೆಯನ್ನು ಬಿತ್ತಬಹುದು.
ಇನ್ನು ಪದೇಪದೇ ಆಳವಾದ ಉಳುಮೆ ಮಾಡುವುದು ತಪ್ಪು. ಪದೇಪದೇ ಉಳುಮೆ ಮಾಡುವುದರಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುವುದು. ಹೀಗಾಗಿ ಹೆಚ್ಚಾದ ಉಳುಮೆ ಭೂಮಿಗೆ ಅಪಾಯಕಾರಿ.
ಗೊಬ್ಬರಗಳ ಬಳಕೆ
ಸಾಮಾನ್ಯವಾಗಿ ಗೊಬ್ಬರಗಳನ್ನು ಪೂರೈಸುವಾಗ ಬೆಳೆಯ ಮಧ್ಯದ ಸಾಲಿನಲ್ಲಿ ಹಾಕುವುದನ್ನು ಕಂಡಿದ್ದೇವೆ. ಹಾಗೆ ಗೊಬ್ಬರಗಳನ್ನು ನೀಡುವುದರಿಂದ ಕಳೆಗಳ ಬೆಳವಣಿಗೆಗೆ ಸಹಾಯ ಮಾಡಿದಂತಾಗುತ್ತದೆ. ಕಳೆ ಬೆಳೆಯುವ ಜಾಗದಲ್ಲಿ ಗೊಬ್ಬರವನ್ನು ನೀಡಿದರೆ, ಕಳೆಗೆ ಪೋಷಕಾಂಶವನ್ನು ನೀಡಿದಂತ್ತಾಗುತ್ತದೆ. ಹಾಗಾಗಿ ಯಾವುದೇ ಗೊಬ್ಬರ ನೀಡಿದರೂ ಬೆಳೆಯ ಬುಡದಲ್ಲಿ ನೀಡಬೇಕು ಮತ್ತು ಹೆಚ್ಚಾಗಿ ಸಾರಜನಕ ಹೊಂದಿದ ಗೊಬ್ಬರವನ್ನು ನೀಡುವುದರಿಂದಲೂ ಕಳೆಗಳು ಹೆಚ್ಚಾಗುತ್ತವೆ. ಸಾರಜನಕದ ಕೃತಕ ಗೊಬ್ಬರಗಳನ್ನು ನೀಡುವ ಬದಲು, ದ್ವಿದಳ ಧಾನ್ಯ ಅಥವಾ ಹಸಿರೆಲೆ ಗೊಬ್ಬರಗಳನ್ನು ಬೆಳೆದು ಮಲ್ಷಿಂಗ್ ಮಾಡುವುದರಿಂದ ಸಾರಜನಕದ ಕೊರತೆ ನಿವಾರಿಸಬಹುದು. ಇದರಿಂದ ಕಳೆಯನ್ನು ನಿಯಂತ್ರಿಸಬಹುದಾಗಿದೆ. ಇನ್ನು ಭೂಮಿಯಲ್ಲಿ ಬಾರ್ಲಿ, ಓಟ್ಸ್, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುವುದರಿಂದಲೂ ಕೂಡ ಕಳೆ ನಿಯಂತ್ರಣವನ್ನು ಮಾಡಬಹುದು.
ಯಂತ್ರೋಪಕರಣಗಳು:
ಕಳೆ ಬಂದಿದೆ ಎಂದ ತಕ್ಷಣ ಕಳೆ ನಾಶಕಕ್ಕೆ ಮೊರೆ ಹೋಗುವ ರೈತರು, ಕಳೆ ನಿತಂತ್ರಣಕ್ಕೆಂದೇ ಲಭ್ಯವಿರುವ ಯಂತ್ರೋಪಕರಣಗಳನ್ನು ಬಳಸುವುದು ಉತ್ತಮ. ಯಾವುದೇ ಕಳೆ ನಾಶಕವನ್ನು ಬಳಸದೆ, ಯಂತ್ರೋಪಕರಣಗಳಿಂದ ಕಳೆ ಕಟಾವು ಅಥವಾ ಮಲ್ಚಿಂಗ್ ಮಾಡುವ ಮುಖಾಂತರ ಭೂಮಿಗೆ ಸೇರಿಸಿದರೆ, ಭೂಮಿಗೆ ಗೊಬ್ಬರ ನೀಡಿದಂತಾಗುತ್ತದೆ. ಇಲ್ಲವಾದರೆ ಕಳೆನಾಶಕ ನಮ್ಮ ಭೂಮಿಯನ್ನು ಸಂಪೂರ್ಣ ಹಾಳು ಮಾಡುವುದು ಖಂಡಿತ.
ಈ ರೀತಿಯಾಗಿ ಸಾವಯವ ಕೃಷಿಯಲ್ಲಿ ಕಳೆ ನಿಯಂತ್ರಣ ಮಾಡುವುದರಿಂದ, ಭೂಮಿಯಲ್ಲಿ ಸಾವಯವ ಇಂಗಾಲ ವೃದ್ಧಿಯಾಗಿ ಜೈವಿಕ ಗೊಬ್ಬರ ದೊರೆತಂತಾಗುತ್ತದೆ. ಬೆಳೆ, ಭೂಮಿ ಮತ್ತು ಮನುಷ್ಯ ಆರೋಗ್ಯವಾಗಿರಬೇಕೆಂದರೆ ಸಾವಯವದಲ್ಲಿ ಕಳೆ ನಿಯಂತ್ರಣ ತುಂಬಾ ಮುಖ್ಯ. ಆಗ ಬೆಳೆದ ಬೆಳೆ, ರೈತನಿಗೆ ಲಾಭದಾಯಕವಾಗುವುದು.
ವರದಿ: ವನಿತಾ ಪರಸಣ್ಣವರ
ಪಾರ್ಥೇನಿಯಂ ಮತ್ತು ಇನ್ನಿತರ ಕಳೆ ನಿಯಂತ್ರಣ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/watch?v=4Lmf7BtCoEU&t=637s