ಡಿಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿಕ ಶ್ರಿನಿವಾಸ್ ರೆಡ್ಡಿ ಅವರು, ತಮ್ಮ ಕೃಷಿ ಭೂಮಿಯಲ್ಲಿ ಪ್ರಪ್ರಥಮ ಬಾರಿಗೆ ಸಾವಯವ ಕೃಷಿ ಅಳವಡಿಸಿಕೊಂಡು ಕೃಷಿಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕೋಲಾರ ಜಿಲ್ಲೆ ಕೆ.ಜಿ.ಎಪ್ ತಾಲೂಕು ಬೇತಮಂಗಲ ಹೋಬಳಿಯ ಟಿ. ಗೊಲ್ಲಳ್ಳಿ ಗ್ರಾಮದಲ್ಲಿ ಕೇಳಿ ಬಂದ ವಿಚಾರವಿದು. ಕೃಷಿಕ ಒಂದೇ ಕೃಷಿ ಭೂಮಿಯಲ್ಲಿ ಎರಡು ಬೆಳೆ ಬೆಳೆಯಲು ಮುಂದಾದ್ರು. ಒಂದು ಟೋಮೆಟೋ, ಮತ್ತೊಂದು ಬಜ್ಜಿ ಮೆಣಸಿಕಾಯಿ ಬೆಳೆ. ಈ ಬೆಳೆಗಳಿಗೆ ಕೃಷಿ ಭೂಮಿ ಒಂದೇಯಾಗಿರಬಹುದು, ಆದ್ರೆ ವಿಭಿನ್ನ ನಿರ್ವಹಣಾ ಪದ್ಧತಿ ಅಳವಡಿಸಿಕೊಂಡಿದ್ದರು.
ಟೊಮೇಟೊ ಬೆಳೆಗೆ ರಾಸಾಯನಿಕ ಕೃಷಿ, ಬಜ್ಜಿ ಮೆಣಸಿಕಾಯಿ ಬೆಳೆಗೆ ಸಾವಯವ ಕೃಷಿ ಪದ್ಧತಿ ಅನುಸರಿಸಿದ್ರು. ಹಾಗಾದ್ರೆ ಈ ಎರಡು ಬೆಳೆಯಲ್ಲಿ ಯಾವ ಬೆಳೆ ರೈತನ ನಂಬಿಕೆ ಉಳಿಸಿಕೊಂಡವು ಎಂಬುವುದನ್ನ ತಿಳಿಯೋಣ.
ಟೊಮೇಟೊ ಬೆಳೆ:
ಕೃಷಿಕ ಶ್ರಿನಿವಾಸ್ ರೆಡ್ಡಿ ರಾಸಾಯನಿಕ ಗೊಬ್ಬರ ಬಳಸಿ ಟೊಮೇಟೊ ಬೆಳೆಯಲು ಮುಂದಾದಾಗ ಸಾಕಷ್ಟು ರೀತಿಯ ವಿಘ್ನಗಳು ಎದುರಾದವು. ಒಂದು ಕಡೆ ಎಷ್ಟೇ ರಾಸಾಯನಿಕ ಸ್ಪ್ರೇಗಳನ್ನ ಕೊಟ್ಟರೂ, ಬೆಳೆಗೆ ಕಾಡುವ ರೋಗ ಮತ್ತು ಕೀಟಬಾಧೆ ನಿಲ್ಲುತ್ತಿಲ್ಲ. ಇದರ ಜತೆಗೆ ಅತಿಯಾದ ಮಳೆಯ ಕಾಟ ಮತ್ತೊಂದೆಡೆ. ಶೀತ ಹೆಚ್ಚಾದ ಹಿನ್ನಲೆಯಲ್ಲಿ ಬೆಳೆ ಮತ್ತಷ್ಟು ಅನಾರೋಗ್ಯಕ್ಕೆ ತುತ್ತಾಗಿ ಇಳುವರಿ ನೀಡದೆ ಅಸುನೀಗಿತು.
ಬಜ್ಜಿ ಮೆಣಸಿನಕಾಯಿ ಬೆಳೆ:
ಕೃಷಿಕ ಬಜ್ಜಿ ಮೆಣಸಿನಕಾಯಿ ಬೆಳೆಗೆ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು, ಟೆನ್ಷನ್ ಫ್ರೀ ವ್ಯವಸಾಯದಲ್ಲಿ ತೊಡಗಿದ್ದರು ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಗಿಡಗಳಿಗೆ ರೋಗ ಮತ್ತು ಕೀಟಬಾಧೆ ಬಾಧಿಸಲಿಲ್ಲ. ಅತಿಯಾದ ಮಳೆಯಾದ್ರು, ಮಳೆಗೆ ಬೆಳೆ ಸೊರಗಿ ನೆಲಕ್ಕುರಳಲಿಲ್ಲ. ಅತಿಯಾದ ಶೀತ ತಡೆದುಕೊಂಡು ರೈತನನ್ನ ಬೆಚ್ಚಗಿಡಲು ಬೆಳೆ ಅದ್ಭುತ ಇಳವರಿ ನೀಡುತ್ತಿದೆ.
ಇದಷ್ಟೆ ಅಲ್ಲ ಕೃಷಿ ಭೂಮಿ ಮೃದುವಾಗಿದೆ, ಮಣ್ಣಿನಲ್ಲಿ ಎರೆಹುಳು ಮತ್ತು ಸೂಕ್ಷ್ಮಾಣು ಜೀವಿಗಳ ಸಂಖ್ಯೆ ದ್ವಿಗುಣವಾಗಿದೆ. ಆದ್ದರಿಂದ ಮಣ್ಣಿನಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣ ಅಭಿವೃದ್ಧಿಯಾಗಿ ವಾಣಿಜ್ಯ ಬೆಳೆಯಾದ ದಾಳಿಂಬೆಗೆ ಕೃಷಿ ಭೂಮಿ ಸಿದ್ಧವಾಗಿದೆ.
ಕೃಷಿಕನ ಅನಿಸಿಕೆ:
ಕೃಷಿಕ ಶ್ರಿನಿವಾಸ್ ರೆಡ್ಡಿ ಕೃಷಿ ಕಾರ್ಮಿಕರಿಗೆ ಸಾವಯವ ಕೃಷಿ ಪದ್ಧತಿಯ ಅರಿವು ಮೂಡಿಸಿ, ಸಾವಯವ ಕೃಷಿಯಲ್ಲಿ ವಾಣಿಜ್ಯ ಬೆಳೆಯಾದ ದಾಳಿಂಬೆ ಬೆಳೆ ಬೆಳೆಯಲು ಒಲವು ತೋರಿದ್ದಾರೆ. ಅದಷ್ಟೆ ಅಲ್ಲದೆ, ಕೃಷಿಕರು ಸಂಕಷ್ಟಕ್ಕೆ ಸಿಲಕಬಾರದೆಂಬ ಉದ್ಧೇಶವಿದ್ರೆ, ನೇರವಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ರೈತರಿಗೆ ತಮ್ಮೂಲಕ ಸಂದೇಶ ಸಾರಿದ್ರು.
ಒಟ್ಟಿನಲ್ಲಿ ಕೃಷಿಕರು ಸಾವಯವ ಕೃಷಿ ಅಳವಡಿಸಿಕೊಂಡರೆ, ಬೆಳೆಗಳಿಗೆ ಎಂತಹದ್ದೇ ಸಂಕಷ್ಟ ಎದುರಾದರೂ ಎದುರಿಸುವ ತಾಕತ್ತು ಬೆಳೆಯಲ್ಲಿರುತ್ತದೆ. ಹಾಗಾಗಿ ಸಾವಯವ ಕೃಷಿ ಉಳಿಸಿ ಬೆಳೆಸಿ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=Pw08tY8ZirE&t=191s