ನೀರಾವರಿ ಇರೋ ಜಮೀನಿನಲ್ಲಿ ಹೇಗೆ ಕೃಷಿ ಮಾಡಬೇಕು ಎಂದು ನಾವು ಮಾತನಾಡುತ್ತೇವೆ. ಆದರೆ ಕೃಷಿ ಭೂಮಿಯಲ್ಲಿ ನೀರಿಲ್ಲದಿದ್ದರೆ? “ಬೋರ್ ವೆಲ್ ತೆಗೆಸಿ ಸಾಕಾಗೋಗಿದೆ ಸರ್”, “1000 ಅಡಿ ಹೊಡೆದ್ರು ನೀರೆ ಸಿಕ್ಕಲ್ಲ”, “ಇಲ್ಲಿ ನೀರೇ ಇಲ್ಲ ಸರ್” ಇವು ರೈತರು ಹತಾಶೆಯಿಂದ ಹೇಳೋ ಮಾತುಗಳು. ಹಾಗಾದರೆ ಏನು ಬೆಳೆಯೋದು? ಡ್ರ್ಯಾಗನ್ ಫ್ರೂಟ್..!
ಡ್ರ್ಯಾಗನ್ ಫ್ರೂಟ್:
ಇದು ಒಣ ಪ್ರದೇಶದಲ್ಲಿ ಬೆಳೆಯಬಹುದಾದ ಹಣ್ಣು. ಕ್ಯಾಕ್ಟಸ್ ಎಂಬ ಮರುಭೂಮಿ ಕುಟುಂಬಕ್ಕೆ ಸೇರಿದ ಹಣ್ಣು. ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲದೆ, ಪೋಷಕಾಂಶಗಳ ಅವಶ್ಯಕತೆಯೂ ಇಲ್ಲದೆ ಬೆಳೆಯಬಹುದಾದ ಬೆಳೆ. ಇದು ಮೂಲತಃ ಅಮೇರಿಕಾದ ಸ್ಥಳೀಯ ಬೆಳೆ. ಇತ್ತೀಚೆಗೆ ನಮ್ಮ ದೇಶದಲ್ಲೂ ಪ್ರಚಲಿತದಲ್ಲಿರುವ ಈ ಹಣ್ಣಿನಲ್ಲಿ ಪ್ರಮುಖವಾಗಿ 3 ವಿಧಗಳಿವೆ. 1.ಕೆಂಪು ಹಣ್ಣು – ಬಿಳಿ ತಿರುಳು 2. ಕೆಂಪು ಹಣ್ಣು – ಕೆಂಪು ತಿರುಳು 3. ಹಳದಿ ಹಣ್ಣು – ಬಿಳಿ ತಿರುಳು. ನಮ್ಮ ದೇಶದಲ್ಲಿ ಹೆಚ್ಚಾಗಿ ಕೆಂಪು ಹಣ್ಣು – ಬಿಳಿ ತಿರುಳು ತಳಿಯ ಹಣ್ಣನ್ನು ಬೆಳೆಯುತ್ತಾರೆ. ಒಂದು ಹಣ್ಣು 500 ಗ್ರಾಂ ವರೆಗೂ. ತೂಗುತ್ತದೆ.
ಡ್ರ್ಯಾಗನ್ ಫ್ರೂಟ್ ಏಕೆ ಸೇವಿಸಬೇಕು? ಆರೋಗ್ಯದ ಪ್ರಯೋಜನಗಳು:
ಡ್ರ್ಯಾಗನ್ ಫ್ರೂಟ್ ಒಂದು ಪೌಷ್ಠಿಕ ದಟ್ಟ(nutrient dense) ಹಣ್ಣು. ಅತ್ಯಂತ ಕಡಿಮೆ ಕ್ಯಾಲರಿ ಮತ್ತು ಅತಿ ಹೆಚ್ಚು ಪ್ರಮಾಣದ ನಾರಿನಾಂಶ, ಮೆಗ್ನೀಶಿಯಂ ಹೊಂದಿದೆ.
ಪೋಷಕಾಂಶಗಳ ವಿವರ:
ಕ್ಯಾಲರಿ: 60
ಪ್ರೋಟಿನ್: 1.2 ಗ್ರಾಂ
ಕೊಬ್ಬು: 0 ಗ್ರಾಂ
ಕಾರ್ಬೊಹೈಡ್ರೇಟ್: 13 ಗ್ರಾಂ
ನಾರು: 3 ಗ್ರಾಂ
ವಿಟಮಿನ್ ಸಿ: 3% of the RDI
ಕಬ್ಬಿಣ: 4% of the RDI
ಮೆಗ್ನೀಶಿಯಂ : 10% of the RDI
ಬೆಳೆಯುವ ವಿಧಾನ:
ಇದು ಉಷ್ಣಾಂಶದಲ್ಲಿ 20C ರಿಂದ 30C ನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಮರಳು ಮಿಶ್ರಿತ ಮಣ್ಣು ಇದಕ್ಕೆ ಉತ್ತಮ. ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕೊಟ್ಟಿಗೆ ಗೊಬ್ಬರ, ಮಣ್ಣು, ಮರಳು ಮಿಶ್ರಣ ಮಾಡಿ ಗಿಡಗಳನ್ನು ನೆಡಬೇಕು. 3 - 4 ತಿಂಗಳ ನಂತರ ಇದರ ಬೇರುಗಳು ಅಭಿವೃದ್ಧಿಗೊಂಡ ನಂತರ ಕೃಷಿಭೂಮಿಗೆ ನಾಟಿ ಮಾಡಬೇಕು. ಏಪ್ರಿಲ್, ಮೇ ತಿಂಗಳಲ್ಲಿ ನಾಟಿ ಮಾಡಿಕೊಳ್ಳಬೇಕು. 1 ವರ್ಷದ ನಂತರ ಹೂ ಬಿಡಲು ಪ್ರಾರಂಭಿಸುತ್ತದೆ. ನಾಟಿ ಮಾಡುವಾಗ ಸಾಲಿಂದ ಸಾಲಿಗೆ 2 ಮೀ. ಮತ್ತು ಗಿಡದಿಂದ ಗಿಡಕ್ಕೆ 2 ಮೀ. ಅಂತರ ಕೊಡಬೇಕಾಗುತ್ತದೆ. ಎಕರೆಗೆ 470 ರಿಂದ 500 ಗಿಡಗಳನ್ನು ಹಾಕಬಹುದು.
ಮಾರುಕಟ್ಟೆ ಮೌಲ್ಯ:
ಡ್ರ್ಯಾಗನ್ ಫ್ರೂಟ್ ದುಬಾರಿ ಹಣ್ಣುಗಳಲ್ಲಿ ಒಂದು. ಕೆಜಿಗೆ 50 ರೂ. ರಿಂದ 400ರೂ. ವರೆಗೆ ಬೆಲೆ ಇದೆ. ಸ್ಟಾರ್ ಹೋಟೆಲ್ಗಳ ಕಾಕ್ಟೇಲ್ ಜ್ಯೂಸ್, ಫ್ರೂಟ್ ಪ್ಲೇಟ್ಗಳಲ್ಲಿ ಈ ಹಣ್ಣಿಗೆ ಸ್ಥಾನವಿದೆ. ರೋಗ-ಕೀಟಬಾಧೆ ಇಲ್ಲದ ಬೆಳೆ, ಯೋಗ್ಯದರ ಕೊಡುವ ಡ್ರ್ಯಾಗನ್ ಫ್ರೂಟ್ ಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಇದೆ. ಒಂದು ಕೆ.ಜಿ ಕೆಂಪು ಡ್ರ್ಯಾಗನ್ ಫ್ರೂಟ್ 200 ರಿಂದ 250ರೂ. ಗೆ ಮಾರಾಟವಾಗುತ್ತದೆ. ಬಿಳಿ ಡ್ರ್ಯಾಗನ್ ಫ್ರೂಟ್ ಕೆಜಿಗೆ 150ರಿಂದ 170 ರೂ.ರಂತೆ ಮಾರಾಟವಾಗುತ್ತದೆ. ಎ,ಬಿ,ಸಿ ಗಳ ಪೈಕಿ ಎ ಗ್ರೇಡ್ ಹಣ್ಣಿಗೆ ಹೆಚ್ಚು ಬೆಲೆ ಇದೆ.
ಬರಹ: ರವಿಕುಮಾರ್ ನಾಯಕ್
ಡ್ರ್ಯಾಗನ್ ಫ್ರೂಟ್ ವ್ಯವಸಾಯದ ಬಗ್ಗೆ ಇನ್ನೂ ಸವಿಸ್ತಾರವಾಗಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.youtube.com/watch?v=X7_XPeuu8fI&list=PLuN9VcGQAtK7-6zk5mGOIJw8j-d89ka_H&index=51