ಸಾವಯವ ಕೃಷಿ ಎಂದರೇನು?
ಸಾವಯವ ಕೃಷಿಗೆ ಅವಿಭಾಜ್ಯ ಅಂಗವೆಂದರೆ ಅದು ಜೈವಿಕ ಗೊಬ್ಬರ. ಜೈವಿಕ ಗೊಬ್ಬರ ಪ್ರಾಣಿ ಜನ್ಯ ವಸ್ತು ಮತ್ತು ಸಸ್ಯ ಜನ್ಯ ವಸ್ತುಗಳಿಂದ ಕೂಡಿದ್ದು, ಮಣ್ಣಿನಲ್ಲಿ ಕೋಟ್ಯಾನುಕೋಟಿ ಉಪಕಾರಿ ಸೂಕ್ಷ್ಮಾಣುಜೀವಿಗಳನ್ನ ವೃದ್ಧಿಸಿ, ನೈಸರ್ಗಿಕ ಆಹಾರೋತ್ಪನ್ನಗಳನ್ನ ತಯಾರಿಸುತ್ತದೆ. ಅದಷ್ಟೆ ಅಲ್ಲದೇ ತ್ವರಿತವಾಗಿ ಕೃಷಿ ಭೂಮಿಯನ್ನ ಫಲವತ್ತುಗೊಳಿಸಿ, ಬೆಳೆಗೆ ಸಿಗಬೇಕಾದ ಸಮಗ್ರ ಪೋಷಕಾಂಶಗಳನ್ನ ನೀಡುವಲ್ಲಿ ತಲ್ಲೀನವಾಗಿರುತ್ತದೆ. ಈ ಕೃಷಿ ವಿಧಾನವನ್ನ ಸಾವಯವ ಕೃಷಿ ಎಂದು ಕರೆಯಬಹುದು.
ಜೈವಿಕ ಗೊಬ್ಬರ:
ಸಸ್ಯಜನ್ಯ ವಸ್ತು: ಸಸ್ಯಗಳ ಮೂಲ. ಅಂದ್ರೆ ಕಸ, ಕಡ್ಡಿ, ಕಳೆ, ತ್ಯಾಜ್ಯ, ಇವುಗಳನ್ನ ಸುಡದೆ, ಜೈವಿಕ ಗೊಬ್ಬರಗಳಾಗಿ ಮಾರ್ಪಾಡಿಸಿ ಭೂಮಿಗೆ ನೀಡುವುದರಿಂದ, ಮಣ್ಣಿನಲ್ಲಿ ಕಳಿತು ಮಣ್ಣನ್ನ ಫಲವತ್ತಾಗಿಸುತ್ತದೆ.
ಪ್ರಾಣಿಜನ್ಯ: ಹಸುವಿನ ಸೆಗಣಿ(ಕೊಟ್ಟಿಗೆ ಗೊಬ್ಬರ), ಗೋ ಮೂತ್ರ, ಕುರಿ ಗೊಬ್ಬರ, ಕೋಳಿ ಗೊಬ್ಬರ, ಇವುಗಳು ಕೃಷಿಗೆ ಅಪಾರ ಕೊಡುಗೆಯಾಗಿವೆ. ಇವುಗಳನ್ನ ಕೃಷಿಕರು ಸದ್ಬಳಕೆ ಮಾಡಿಕೊಂಡರೆ ಕೃಷಿಯಲ್ಲಿ ಸುಸ್ಥಿರತೆ ಕಾಣಬಹುದು.
ಸಾವಯವದಲ್ಲಿ ಕೃಷಿ ಭೂಮಿಯ ಫಲವತ್ತತೆ:
ಫಲವತ್ತಾದ ಕೃಷಿ ಭೂಮಿಯಲ್ಲಿ ಸರಾಸರಿ ರಸಸಾರ 2.5 ರಿಂದ 7.5 ರಷ್ಟಿರಬೇಕು. ಇದರ ಜತೆಗೆ ಮಣ್ಣಿನಲ್ಲಿ ಜೈವಿಕ, ಭೌತಿಕ ಗುಣ, ರಾಸಾಯನಿಕ ಗುಣ ಸಮೃದ್ಧವಾಗಿರಬೇಕು. ಈ ಎಲ್ಲ ಗುಣಗಳನ್ನ ಹೊಂದಿದ್ರೆ, ಆ ಒಂದು ಕೃಷಿ ಭೂಮಿಯನ್ನ ಫಲವತ್ತಾಗಿರುವ ಕೃಷಿ ಭೂಮಿ ಎನ್ನುತ್ತಾರೆ. ಈ ಎಲ್ಲಾ ಗುಣಗಳನ್ನ ಕೃಷಿಕರು, ಕಡಿಮೆ ಖರ್ಚಿನ ಸಾವಯವ ಕೃಷಿಯಲ್ಲೇ ಸೃಷ್ಠಿಸಲು ಸಾಧ್ಯ.
ಮೊದಲನೆಯದಾಗಿ ಕೃಷಿ ಭೂಮಿಯಲ್ಲಿ ಸಾವಯವ ಅಂಶವನ್ನ ಹೆಚ್ಚಾಗಿಸಬೇಕು. ಹಾಗಾಗಿ ಕೃಷಿ ಭೂಮಿಗೆ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರಗಳನ್ನ ನೀಡಬೇಕು. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಅಡಗಿರುವ ಉಪಕಾರಿ ಸೂಕ್ಷ್ಮಾಣುಜೀವಿಗಳು ಮತ್ತು ಎರೆಹುಳುಗಳಿಗೆ ಆಹಾರ ಸಿಗುತ್ತದೆ. ಇದರಿಂದ ಅವುಗಳು ತಮ್ಮ ಕೆಲಸದಲ್ಲಿ ಮತ್ತಷ್ಟು ಕ್ರಿಯಾಶೀಲತೆಯನ್ನ ಪಡೆಯುತ್ತವೆ. ಆಗ ಕೃಷಿ ಭೂಮಿಯಲ್ಲಿ ಬಿದ್ದ ತ್ಯಾಜ್ಯ ಕಳಿತು, ಸಾವಯವ ಇಂಗಾಲವಾಗಿ ಅಭಿವೃದ್ಧಿಯಾಗುತ್ತದೆ. ಇಂತಹ ಮಣ್ಣಿನಲ್ಲಿ ಜೈವಿಕ, ಭೌತಿಕ ಮತ್ತು ರಾಸಾಯನಿಕ ಗುಣಗಳು ಸಮೃದ್ಧವಾಗಿ ಮಣ್ಣು ಹೆಚ್ಚು ಫಲವತ್ತಾಗಿರಲು ಸಹಾಯವಾಗುತ್ತದೆ.
ಸಾವಯವದಲ್ಲಿ ಕಳೆ, ಕೀಟ ಮತ್ತು ರೋಗ ಬಾಧೆಗಳ ನಿಯಂತ್ರಣ:
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೀಳುವ ಬಿರು ಬಿಸಿಲಿನಲ್ಲಿ ಮಾಗಿ ಉಳುಮೆ ಮಾಡಿಕೊಳ್ಳಬೇಕು. ನಂತರ ಕೃಷಿ ಭೂಮಿಯಲ್ಲಿ ಬಂದ ಕಳೆ, ತ್ಯಾಜ್ಯ ಹಾಗೂ ಹಸಿರೆಲೆ ಗೊಬ್ಬರಗಳನ್ನ ಭೂಮಿಗೆ ಸೇರಿಸಬೇಕು. ಈ ಎಲ್ಲಾ ಅಂಶಗಳು ಮಣ್ಣಿನಲ್ಲಿ ಕಳೆಯುವಾಗ ಕೆಲ ಆಮ್ಲಗಳು ಬಿಡುಗಡೆಯಾಗುತ್ತಿರುತ್ತವೆ. ಆಗ ಮಣ್ಣಿನಲ್ಲಿದ್ದ ಕಳೆಯ ಬೀಜಗಳು ಮತ್ತು ಅಪಕಾರಿ ಸೂಕ್ಷ್ಮಾಣು ಜೀವಿಗಳು, ಕೀಟಗಳ ಮೊಟ್ಟೆ, ಕೋಶಗಳೆಲ್ಲ ನಾಶವಾಗುತ್ತದೆ. ಆಗ ಬೆಳೆಗೆ ಕಾಡುವ ಕೀಟಬಾಧೆ, ರೋಗಬಾಧೆ, ಕಳೆಬಾಧೆ ನಿಯಂತ್ರಣವಾಗುತ್ತದೆ.
ಬೆಳೆಗಳಿಗೆ ರೋಗ ಮತ್ತು ಕೀಟದ ಹಾವಳಿ ಇದ್ದಲ್ಲಿ, ಬೇವಿನ ಎಣ್ಣೆ, ಹುಳಿ ಮಜ್ಜಿಗೆಯಂತಹ ಸ್ಪ್ರೇಗಳನ್ನ ಕೊಟ್ಟು ನಿಯಂತ್ರಿಸಬಹುದಾಗಿದೆ. ನಂತರ ಬೆಳೆಗೆ ಆಗಾಗ ಜೀವಾಮೃತ, ಪಂಚಂಗವ್ಯ, ದಶಪರಣಿ, ನೀಮಸ್ತ್ರ, ಅಗ್ನಿಅಸ್ತ್ರ, ಈ ಎಲ್ಲಾ ಜೈವಿಕಾಂಶಗಳನ್ನ ಬೆಳೆಗಳಿಗೆ ನೀಡುವುದರಿಂದ ಬೆಳೆಗಳು ಸಮೃದ್ಧವಾಗಿ, ಉತ್ತಮ ಇಳುವರಿ ನೀಡಲು ಸಜ್ಜಾಗುತ್ತದೆ.
ಸಾವಯವ ಕೃಷಿಯಲ್ಲಿ ಇಳುವರಿಯ ಮಹತ್ವ:
ಸಾವಯವ ಕೃಷಿಯಲ್ಲಿ ಬೆಳೆ ಬೆಳೆಯಲು ಮುಂದಾದ್ರೆ, ಸಾವಯವ ಗೊಬ್ಬರ ಬಳಕೆಯಿಂದ(ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ) ಮಣ್ಣಿನ ಫಲವತ್ತತೆಯನ್ನ ದೀರ್ಘಾವಧಿಯವರೆಗೂ ಕಾಪಾಡಿಕೊಂಡು, ಉತ್ತಮ ಬೇಸಾಯ ಮಾಡಬಹದು. ಇದರ ಜತೆಗೆ ಬೆಳೆ ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದ್ದರಿಂದ, ಬೆಳೆಗಳು ಆರೋಗ್ಯಕರವಾಗಿರುತ್ತವೆ. ಹೀಗಾಗಿ ಬೆಳೆಗಳು ಉತ್ತಮ ಇಳುವರಿ ನೀಡಲು ಶುರು ಮಾಡುತ್ತವೆ.
ಇದಷ್ಟೇ ಅಲ್ಲದೆ, ಕೃಷಿ ಭೂಮಿ ಸಾವಯವ ಕೃಷಿಯಿಂದ ಸುಸ್ಥಿರಗೊಂಡ ಕಾರಣ, ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚು ನೀಡುತ್ತಾಳೆ. ಬಂದ ಇಳುವರಿ ಕ್ವಾಲಿಟಿಯಾಗಿತ್ತದೆ ಮತ್ತು ವಿಷಮುಕ್ತವಾಗಿರುತ್ತದೆ.
ಸಾವಯವ ಕೃಷಿ ಮತ್ತು ರಾಸಾಯನಿಕ ಕೃಷಿಯ ವ್ಯತ್ಯಾಸ:
ಸಾವಯವ ಕೃಷಿ: ಕೃಷಿ ಭೂಮಿಗೆ ನೈಸರ್ಗಿಕ ಪೋಷಕಾಂಶ ಸಿಗುವ ಕಾರಣ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಕೃಷಿ ಭೂಮಿ ಫಲವತ್ತಾಗಿ, ಬೆಳೆದ ಬೆಳೆ ಯಾವುದೇ ರೋಗ ಮತ್ತು ಕೀಟಬಾಧೆಗೆ ತುತ್ತಾಗದೆ ಸಮೃದ್ಧವಾದ ಇಳುವರಿ ನೀಡಲು ಶಕ್ತವಾಗುತ್ತದೆ.
ರಾಸಾಯನಿಕ ಕೃಷಿ:
ಕೃಷಿ ಭೂಮಿಗೆ ಕೃತಕ ಪೋಷಕಾಂಶಗಳು(ರಾಸಾಯನಿಕ ಗೊಬ್ಬರ ಅಥವಾ ಸರ್ಕಾರಿ ಗೊಬ್ಬರ) ದೊರೆಯುವ ಹಿನ್ನೆಲೆ, ಬೆಳೆ ತಾತ್ಕಾಲಿಕವಾಗಿ ಆರೋಗ್ಯವಾಗಿದ್ದು, ಆಕರ್ಷಣೀಯ ಇಳುವರಿ ನೀಡುತ್ತದೆ. ಆದ್ರೆ ಮುಂದೆ ಬೆಳೆ ಸಾಕಷ್ಟು ರೋಗ ಮತ್ತು ಕೀಟಬಾಧೆಗೆ ತುತ್ತಾಗಿ ಬೆಳೆ ನಾಶವಾಗುತ್ತದೆ. ನಂತರ ರೈತರಿಗೆ ಇಳುವರಿ ಸಿಗದೆ ಹೋಗುತ್ತದೆ.
ರಾಸಾಯನಿಕ ಕೃಷಿ ಪದ್ಧತಿಯಿಂದ ಕೃಷಿ ಭೂಮಿಯಲ್ಲಿ ಅಡಗಿರುವ ಉಪಕಾರಿ ಸೂಕ್ಷ್ಮಾಣುಜೀವಿಗಳು ಮತ್ತು ಎರೆಹುಳುಗಳಿಗೆ ತೊಂದರೆಯಾಗಿ ನಶಿಸುತ್ತವೆ. ಹೀಗಾಗಿ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಬರಡಾಗುತ್ತಾಳೆ. ಇದರಿಂದ ರೈತನ ಕನಸುಗಳು ಕನಸಾಗಿಯೇ ಉಳಿಯುತ್ತವೆ.
ಒಟ್ಟಿನಲ್ಲಿ ಕೃಷಿಕರು ಭೂಮಿಗೆ ಮತ್ತು ಬೆಳೆಗೆ, ಜೀವಾಣುಗಳಿಗೆ ಹಾಗೂ ಮನಕುಲಕ್ಕೆ ಹಾನಿಯಾಗುವುದು. ರಾಸಾಯನಿಕ ಕೃಷಿ ಕೈಬಿಟ್ಟು, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಸೂಕ್ತ.
ವರದಿ: ಶ್ವೇತಾ ಕಲಕಣಿ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=gJK2AK0olyM