ನೆಮಟೋಡ್ ಸಂತತಿ ಹೆಚ್ಚಾಗಲು ಕಾರಣ:
ಇಂದಿನ ಕೃಷಿ ವಿಧಾನದಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರಗಳನ್ನ ಬಳಸುತ್ತಿರುವುದರಿಂದ, ಮಣ್ಣಿನಲ್ಲಿ ಅಪಕಾರಿ ಸೂಕ್ಷ್ಮಾಣು ಜೀವಿಗಳನ್ನ ಬೇಟೆಯಾಡುವ ಉಪಕಾರಿ ಸೂಕ್ಷ್ಮಾಣು ಜೀವಿಗಳು ನಶಿಸುತ್ತಿವೆ. ಹಾಗಾಗಿ ಬೆಳೆ ನಾಶ ಮಾಡಲು ಹಾತೊರೆಯುವ ಅಪಕಾರಿ ಸೂಕ್ಷ್ಮಾಣು ಜೀವಿಗಳ ಸಂತತಿ ಹೆಚ್ಚುತ್ತಿದೆ.
ಈ ನೆಮಟೋಡ್ ಕೂಡ, ಅಪಕಾರಿ ಸೂಕ್ಷ್ಮಾಣು ಜೀವಿಗಳಿಗೆ ಸಂಬಂಧಿಸುವ ಸೂಕ್ಷ್ಮಾಣು ಜೀವಿ. ಇದು ಶೇ 5 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನದ ವಾತಾವರಣದಲ್ಲಿ ಕಂಡು ಬರುತ್ತದೆ. ಈ ಹುಳಕ್ಕೆ ನೇರ ಟಾರ್ಗೇಟ್ ಒಂದೇ ಬೆಳೆಯಲ್ಲ, ಪಾಚಿಯಿಂದ ಹಿಡಿದು, ದೈತ್ಯಾಕಾರವಾಗಿ ಬೆಳೆಯುವ ಪ್ರತಿ ಬೆಳೆಯನ್ನೂ ಆಕ್ರಮಿಸುವ ಸಾಮರ್ಥ್ಯವಿದೆ.
ಬೆಳೆಯಲ್ಲಿ ನೆಮಟೋಡ್ ಪ್ರವೇಶ:
ಕೃಷಿ ಬೆಳೆಗಳಿಗೆ ಹಾನಿ ಮಾಡುವ ಜಂತು ಹುಳು(ನೆಮಟೋಡ್)ಗಳಿಗೆ ಸ್ಪೆತಿಕ್ ಎಂಬ ಚೂಪಾದ ಅಂಗ ಬಾಯಲ್ಲಿರುತ್ತದೆ. ಅದರ ಸಹಾಯದಿಂದ ಬೇರಿನ ಜಿವಕಣಗಳನ್ನ ಚುಚ್ಚಿ ಒಳಗೆ ಪ್ರವೇಶಿಸುತ್ತದೆ. ಆನಂತರ ಗಿಡದಲ್ಲಿ ಪೋಷಕಾಂಶ ಹೀರಿಕೊಳ್ಳಲು ಶುರುಮಾಡುತ್ತದೆ.
ಬಾಧಿತಗೊಂಡ ಬೆಳೆಯ ಲಕ್ಷಣ:
ಬಾಧೆಗೆ ಒಳಗಾದ ಬೆಳೆಯ ಬೇರು ಗಂಟುಗಳಿಂದ ಕೂಡಿರುತ್ತದೆ. ಆ ಗಂಟುಗಳನ್ನ ಸರಳವಾಗಿ ಬಿಡಿಸಲು ಆಗವುದಿಲ್ಲ, ಗಟ್ಟಿಯಾಗಿರುತ್ತದೆ. ಬೆಳೆಯ ಬೆಳವಣಿಗೆಯಲ್ಲಿ ಅಸಮತೋಲನವಿರುತ್ತದೆ. ( ಒಂದು ಗಿಡ ಚಿಕ್ಕದು, ಒಂದು ದೊಡ್ಡದು). ಹಳದಿ ವರ್ಣ ತುಂಬಿಕೊಂಡಿರುತ್ತದೆ. ಎಲೆಗಳು ಸುರುಳಿ ಸುತ್ತಿರುತ್ತವೆ. ಬೆಳೆ ಸೊರಗಿದಂತೆ ಕಾಣುತ್ತದೆ. ಗಿಡಗಳು ಮೇಲಿನಿಂದ ಒಣಗುತ್ತಿರುತ್ತವೆ. ರೈತನಿಗೆ ಇಳವರಿ ನೀಡದೆ, ಒಂದೊಂದೇ ಗಿಡಗಳು ಸಾವಿಗೀಡಾಗುತ್ತವೆ.
ಬೆಳೆಯ ನರಮಂಡಲಕ್ಕೆ ಸಾಗುವ ಪೋಷಕಾಂಶವನ್ನ, ನೆಮಟೋಡ್ ಗಳು ನಿಲ್ಲಿಸಿರುತ್ತವೆ. ಹಾಗಾಗಿ, ಎಲೆಗಳಿಗೆ ಪೋಷಕಾಂಶ ಸಿಗದ ಕಾರಣ, ಆಹಾರ ಉತ್ಪಾದನೆ ಕುಂಠಿತವಾಗುತ್ತದೆ. ಇದರಿಂದಾಗಿ ಬೆಳೆ ಇಳುವರಿ ನೀಡುವ ಸಾಮರ್ಥ್ಯ ಕಳೆದುಕೊಳ್ಳುತ್ತದೆ.
ಸೂಚನೆ:
ನೆಮಟೋಡ್ ಬೇರುಗಳು ನೋಡಲು ದೊಡ್ಡ ಗಾತ್ರದ ಗಂಟುಗಳನ್ನ ಹೊಂದಿರುತ್ತದೆ. ಆದ್ರೆ ದ್ವಿದಳ ಧಾನ್ಯ ಬೇರುಗಳು ಚಿಕ್ಕ ಚಿಕ್ಕ ಗಂಟುಗಳನ್ನ ಹೊಂದಿರುತ್ತದೆ. ಈ ವಿಚಾರ ಅರಿತು ನೆಮಟೋಡ್ ಗುರುತಿಸಿ.
ನೆಮಟೋಡ್ (ಜಂತು ಹುಳು)ಗಳ ನಿಯಂತ್ರಣ:
- ಬೇಸಿಗೆಯ ಸುಡು ಬಿಸಿಲಿ(ಏಪ್ರಿಲ್ ಮತ್ತು ಮೇ)ನಲ್ಲಿ ಮಾಗಿ ಉಳುಮೆ ಮಾಡಿಕೊಳ್ಳಬೇಕು. ಇದರಿಂದ ಮಣ್ಣಿನಲ್ಲಿದ್ದ ನೆಮಟೋಡ್ ಕೋಶಗಳು ಮತ್ತು ಮೊಟ್ಟೆಗಳು ನಾಶವಾಗುತ್ತವೆ. ಕೃಷಿ ಭೂಮಿಗೆ ಹಸಿರೆಲೆ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ನೀಡಬೇಕು. ಇಲ್ಲಿ ವಿಘಟನೆಯ ಸಂದರ್ಭದಲ್ಲಿ ಬರುವ ಆಮ್ಲದಿಂದಲೂ ಜಂತುಹುಳಗಳು ನಿಯಂತ್ರಣವಾಗುತ್ತವೆ.
- ರೋಗ ನಿರೋಧಕ ಶಕ್ತಿ ಹೊಂದಿದ ತಳಿ ಮತ್ತು ಬೀಜಗಳ ಆಯ್ಕೆ ಮಾಡಿಕೊಳ್ಳಬೇಕು. ಹಾಗೆ ಬಿತ್ತುವ ಪೂರ್ವದಲ್ಲಿ ಬೀಜಗಳಿಗೆ ಬೀಜೋಪಚಾರವನ್ನ ಕಡ್ಡಾಯವಾಗಿ ಮಾಡಲೇ ಬೇಕು.
- ಒಂದೇ ಬೆಳೆಯನ್ನ ಪದೇಪದೇ ಬೆಳೆದರೆ ಜಂತು ಹುಳಗಳ ಜೀವನ ಕ್ರಿಯೆಗೆ ಪುಷ್ಟಿ ನೀಡಿದಂತಾಗುತ್ತದೆ. ಹಾಗಾಗಿ ಬೆಳೆಯ ಆವರ್ತನೆ ಮಾಡಬೇಕು( ಬೆಳೆ ಬದಲಿಸಬೇಕು). ಚೆಂಡು ಹೂ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಸಾಸಿವೆ ಬೆಳೆ ಬೆಳೆದರೆ, ಇವುಗಳ ಬೇರಿನಿಂದ ಬರುವ ಆಮ್ಲದಿಂದಲೂ ನೆಮಟೋಡ್ ಗಳನ್ನ ನಿಯಂತ್ರಿಸಬಹದು.
- ಮಣ್ಣಿನಲ್ಲಿ ಸಾವಯವ ತ್ಯಾಜ್ಯ ಹೆಚ್ಚಿಸಿ, ಉಪಕಾರಿ ಸೂಕ್ಷ್ಮಾಣು ಜೀವಿಗಳ ಸಂತತಿ ವೃದ್ಧಿಸಬೇಕು. ಆಗ ಉಪಕಾರಿ ಸೂಕ್ಷ್ಮಾಣು ಜೀವಿಗಳು ನೆಮಟೋಡ್ ಗಳನ್ನ ಭಕ್ಷಿಸುತ್ತವೆ.
- ರಾಸಾಯನಿಕ ಕೃಷಿ ಪದ್ಧತಿಯನ್ನ ನಿಲ್ಲಿಸಿ, ಸಾವಯವ ಕೃಷಿ ಪದ್ಧತಿಯನ್ನ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಕೃಷಿ ಭೂಮಿ ಫಲವತ್ತಾಗಿ, ಉಪಕಾರಿ ಸೂಕ್ಷ್ಮಾಣು ಜೀವಿಗಳ ತಾಣವಾಗುತ್ತದೆ.
ಜೈವಿಕ ಕೀಟನಾಶಕಗಳ ತಯಾರಿಕೆ:
ಸಾವಯವದಿಂದ ನೆಮಟೋಡ್ ಗಳನ್ನ ನಿಯಂತ್ರಿಸುವಾಗ ಬೇವು, ಕೊಟ್ಟಿಗೆ ಗೊಬ್ಬರ, ಹೊಂಗೆ ಹಿಂಡಿ, ಎರೆಹುಳು ಗೊಬ್ಬರ ಬಹಳ ಮುಖ್ಯ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಹೊಂಗೆ ಹಿಂಡಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಪ್ರತಿ ಒಂದು ಟನ್ ಗೆ ಎರಡು ಕೆ.ಜಿ ಟ್ರೈಕೋಡರ್ಮಾ, ಎರಡು ಕೆ.ಜಿ ಪ್ಯಾಸಿಲೋಮೈಸಿಸ್ ಲಿಲೇಸಿನೆಸ್( ಜೈವಿಕ ಜಂತು ನಾಶಕ), ಎರಡು ಕೆ.ಜಿ ಪ್ಯಾಸಿಲೋಮೈಸಿಸ್ ಪ್ಲೊರೆಸೆನ್ಸ್( ಬ್ಯಾಕ್ಟಿರಿಯಾ ನಾಶಕ) ವನ್ನ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನ 15 ದಿನಗಳ ಕಾಲ ನೆರಳಿನಲ್ಲಿರಿಸಿ, ಇದರ ಮೇಲೆ ಪಾಲಿತಿನ್ ಹಾಳೆ ಅಥವಾ ಗರಿಗಳಿಂದ ಮುಚ್ಚಬೇಕು. ಶೇಕಡಾ 20 ರಷ್ಟು ತೇವಾಂಶ ಕಾಯ್ದುಕೊಂಡು ಆಗಾಗ ಮಣ್ಣನ್ನ ತಿರುವುತ್ತಿರಬೇಕು.
15 ದಿನಗಳ ನಂತರ ನೆಮಟೋಡ್ ಗಳ ವಿರುದ್ಧ ಹೋರಾಡಲು ಸೂಕ್ಷ್ಮಾಣು ಜೀವಿಗಳು ಅಭಿವೃದ್ಧಿಯಾಗಿರುತ್ತವೆ. ಈ ಮಿಶ್ರಣವನ್ನ ಒಂದೊಂದು ಗಿಡಕ್ಕೆ 50 ಗ್ರಾಂ ನಷ್ಟು ಕೊಡಬೇಕು. ಹೀಗೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ನೆಮಟೋಡ್ ಗಳಿಗೆ ವಿದಾಯ ಹೇಳಬಹುದಾಗಿದೆ.
ಒಟ್ಟಿನಲ್ಲಿ ಕೃಷಿಕರು ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಾಣು ಜೀವಿಗಳನ್ನ ಜೀವಿಸಲು ಬಿಟ್ರೆ, ಅಪಾಯ ನೀಡುವ ಅಪಾಯಕಾರಿ ಸೂಕ್ಷ್ಮಾಣು ಜೀವಿಗಳು ಬೆಳೆಯ ಹತ್ತಿರ ಸುಳಿಯುವುದಿಲ್ಲ. ಹಾಗಾಗಿ ಸಾವಯವ ಕೃಷಿ ಅಳವಡಿಸಿಕೊಂಡು ಬೆಳೆಗಳನ್ನ ನೆಮಟೋಡ್ ಗಳಿಂದ ರಕ್ಷಿಸುವುದು ಅನಿವಾರ್ಯ.
ವರದಿ: ಶ್ವೇತಾ ಕಲಕಣಿ
ಈ ಕುರಿತು ಇನ್ನು ಹೆಚ್ಚು ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=FSaS1JxNXNw&t=63s