ಈ ನಿಟ್ಟಿನಲ್ಲಿ ಯೋಚಿಸಿದ ಕೃಷಿಕ ಗುರುಸ್ವಾಮಿಯವರು, ತಮ್ಮ ಹಾಗಲಕಾಯಿ ಬೆಳೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ಮುಂದಾದರು. ಇದರಿಂದ ಗಟ್ಟಿಯಾಗಿದ್ದ ಕೃಷಿ ಭೂಮಿ ಮೃದುವಾಯಿತು, ಮಣ್ಣಿನಲ್ಲಿ ಎರೆಹುಳುಗಳು ಆರಂಭವಾದವು, ಭೂಮಿಗೆ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಾಯಿತು. ಇದರ ಜತೆಗೆ ಹಾಗಲಕಾಯಿ ಬೆಳೆ ಕೂಡ ಅತ್ಯಾಕರ್ಷಣೀಯವಾಗಿ ಹೊಳೆಯುತ್ತಾ, ಭರ್ಜರಿ ಇಳುವರಿ ನೀಡುತ್ತಿದೆ. ಇದಷ್ಟೆ ಅಲ್ಲದೆ ಈ ತೋಟದಲ್ಲಿ ಕೀಟ ಮತ್ತು ರೋಗ ಬಾಧೆ ಹಾಗೂ ವೈರಸ್ ಗಳಿಗೆ ಜಾಗವಿಲ್ಲದಿರುವುದೇ ವಿಶೇಷ. ಇಂತಹದೊಂದು ದೃಶ್ಯ ಕಂಡು ಬಂದಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗ್ರಾಮದಲ್ಲಿ.
ಸಾವಯವ ಕೃಷಿಯ ಪ್ರಯೋಗ:
ಕಳೆದ ವರ್ಷ ಹಾಗಲಕಾಯಿ ಬೆಳೆಯನ್ನ, ರಾಸಾಯನಿಕ ಕೃಷಿಯಲ್ಲಿ ಬೆಳೆದಿದ್ದರು. ಅಂದು ಇವರಿಗಾದ ಸಂಕಟ ಅಷ್ಟಿಷ್ಟಲ್ಲ. ರಾಸಾಯನಿಕದ ಸಹವಾಸದಿಂದಾಗಿ ಬೆಳೆ ವೈರಸ್ ಗೆ ತುತ್ತಾಗಿ, ಹಸಿರು ಬಣ್ಣ ಬಿಟ್ಟು, ಹಳದಿ ಬಣ್ಣ ತುಂಬಿಕೊಂಡಿತ್ತು. ಇದರಿಂದ ಕೃಷಿಕ ಅಂದುಕೊಂಡ ಇಳುವರಿ ಸಿಗಲಿಲ್ಲ. ಬದಲಾಗಿ ಖರ್ಚು ಹೆಚ್ಚಾಯಿತು, ಭೂಮಿಯ ಆರೋಗ್ಯ ಕಡಿಮೆಯಾಗಿತ್ತು. ಹೀಗಾಗಿ ಕೃಷಿಕ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದರು. ರಾಸಾಯನಿಕ ಕೃಷಿ ಪದ್ಧತಿಗೆ ವಿದಾಯ ಹೇಳಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಬೆಳೆ ಮತ್ತು ಭೂಮಿಯ ಆರೋಗ್ಯ ಹೇಗಿರುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಅರಿಯೋಣ ಎಂದು ಟೊಮೇಟೊ ಬೆಳೆ ಬೆಳೆದರು.
ಒಂದು ಕಡೆ ಕೃಷಿಕ ಗುರುಸ್ವಾಮಿ ತಮ್ಮ ತೋಟದಲ್ಲಿ ಸಾವಯವ ಕೃಷಿಯಲ್ಲಿ ಟೊಮೇಟೊ ಬೆಳೆಯುತ್ತಿದ್ದರೆ, ಮತ್ತೊಂದು ಕಡೆ ಅವರ ಸಹೋದರ ರಾಸಾಯನಿಕದಲ್ಲಿ ಟೊಮೇಟೊ ಬೆಳೆ ಬೆಳೆಯುತ್ತಿದ್ದರು. ಈ ಪ್ರಯೋಗದಲ್ಲಿ ಯಾವುದು ಯಶಸ್ವಿಯಾಗುತ್ತದೆ ಎಂಬ ಕುತೂಹಲ, ಈ ಸಹೋದರರಿಗೆ ಮಾತ್ರವಲ್ಲದೇ ನೆರೆಯ ಕೃಷಿಕರಿಗೂ ಹೆಚ್ಚಾಯಿತು.
ಆ ಸಂದಿಗ್ಧ ಹೋರಾಟದಲ್ಲಿ ಪೂರ್ಣ ಜಯಗಳಿಸಿದ್ದು, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಹಳ್ಳಿ ಹಕ್ಕಿ ಸಾವಯವ ಕೃಷಿ. ಹೌದು ಸಾವಯವ ಕೃಷಿಯಲ್ಲಿ ಯಾವುದೇ ವಿಘ್ನಗಳಿಲ್ಲದೆ ಟೊಮೇಟೊ ಬೆಳೆಯಿಂದ ಉತ್ತಮ ಇಳುವರಿ, ಹಾಗೆ ಕೃಷಿ ಭೂಮಿ ಆರೋಗ್ಯಕರವಾಗಿತ್ತು. ಹೀಗಾಗಿ ಕೃಷಿಕ ಈ ಬಾರಿ ಹಾಗಲಾಕಾಯಿ ಬೆಳೆಯುವಾಗ ಸಾವಯವ ಕೃಷಿಯನ್ನ ಆಯ್ಕೆ ಮಾಡಿಕೊಂಡು ಉತ್ತಮ ಫಲ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಕೃಷಿಕ ರಾಸಾಯನಿಕ ಕೃಷಿ ಕರಾಳತೆಯನ್ನ ಬೇಗ ಅರ್ಥ ಮಾಡಿಕೊಂಡಿದ್ದರ ಫಲವಾಗಿ, ಇಂದು ಬೆಳೆ ಮತ್ತು ಭೂಮಿ ಎರಡೂ ಆರೋಗ್ಯವಾಗಿರಲು ಕಾರಣವಾಗಿದೆ.
ವರದಿ: ಶ್ವೇತಾ ಕಲಕಣಿ
ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=-B-6mf6kwZs
Blog