ರಾಸಾಯನಿಕ ಕೃಷಿ ಪದ್ಧತಿ ಮೊದಲಿಗೆ ಉತ್ತಮ ಇಳುವರಿ ನೀಡಬಹುದು. ಆದ್ರೆ, ದಿನಕಳೆದಂತೆಲ್ಲ ಇಳುವರಿ ಕಡಿಮೆಯಾಗುತ್ತಾ ಸಾಗುತ್ತೆ. ಬೆಳೆಯಲ್ಲಿ ರೋಗಗಳು ಮತ್ತು ಅಪೌಷ್ಠಿಕತೆ ತಾಂಡವವಾಡುತ್ತದೆ. ಮತ್ತೊಂದೆಡೆ ಕೃಷಿಕನ ದೈಹಿಕ, ಮಾನಸಿಕ ಹಾಗೂ ಆರ್ಥಿಕ ಆರೋಗ್ಯವೂ ಹದಗೆಡುತ್ತಾ ಸಾಗುತ್ತದೆ.
ರಾಸಾಯನಿಕ ಪೋಷಕಾಂಶದಿಂದ ಬೆಳೆಗಳಿಗೆ ಅಪೌಷ್ಠಿಕತೆ:
ರಾಸಾಯನಿಕ ಗೊಬ್ಬರ, ಇದೊಂದು ಬೆಳೆಗಳಿಗೆ ನೀಡುವ ಕೃತಕ ಪೋಷಕಾಂಶ. ರೈತರು ಈ ಗೊಬ್ಬರಗಳನ್ನ ನಂಬಿ ಬೆಳೆ ಬೆಳೆಯಲು ಮುಂದಾಗುತ್ತಾರೆ. ಆದ್ರೆ ಅದರಿಂದಾಗುವ ದುರಂತವೇನು ಅಂದ್ರೆ, ಕೊಟ್ಟ ಗೊಬ್ಬರ ಸಂಪೂರ್ಣವಾಗಿ ಗಿಡದ ಬೆಳವಣಿಗೆಗೆ ಉಪಯೋಗವಾಗುವುದಿಲ್ಲ. ಭೂಮಿಗೆ ನೀಡಿದ ಕೆಲವೇ ಗಂಟೆಗಳಲ್ಲಿ, ತನ್ನಲ್ಲಿರುವ ಸ್ವಲ್ಪ ಪ್ರಮಾಣದ ಪೋಷಕಾಂಶ ಮಾತ್ರ ಗಿಡಗಳಿಗೆ ಮತ್ತು ಬೆಳೆಗಳಿಗೆ ದೊರೆಯುತ್ತದೆ. ನಂತರ ಉಳಿದ ಎಲ್ಲ ರಾಸಾಯನಿಕದ ಅಂಶ ನೀರಿನ ಜತೆ ಸೇರಿ, ಮಣ್ಣಿನ ಆಳದ ಪದರಗಳಲ್ಲಿ ನುಗ್ಗುತ್ತದೆ. ಆಗ ಅಂತರ್ಜಲ ನೀರು ಕೂಡ ಕಲುಷಿತಗೊಳ್ಳುತ್ತದೆ. ಇದಷ್ಟೆ ಅಲ್ಲ, ಸೂರ್ಯನ ಕಿರಣಗಳು ಮತ್ತು ಬಿಸಿ ಹಬೆ ಜತೆಗೂಡಿ ವಾತಾವರಣಕ್ಕೆ ಸೇರಿಕೊಳ್ಳುತ್ತದೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಹೀಗಾಗಿ ರಾಸಾಯನಿಕದಲ್ಲಿ ಬೆಳೆದ ಬೆಳೆಗಳು ಅಪೌಷ್ಠಿಕತೆಯಿಂದ ಬಳಲಿ, ಪ್ರತಿ ಸಮಯದಲ್ಲೂ ಉತ್ತಮ ಇಳುವರಿ ನೀಡಲು ಶಕ್ತವಾಗುವುದಿಲ್ಲ.
ರಾಸಾಯನಿಕದಿಂದ ಕೃಷಿ ಭೂಮಿಗೆ ಆಗುವ ತೊಂದರೆ:
ಕೃಷಿ ಭೂಮಿ ಫಲವತ್ತಾಗಿರಬೇಕು ಅಂದ್ರೆ, ಮಣ್ಣಿನಲ್ಲಿ ಜೈವಿಕ ಗುಣ, ಭೌತಿಕ ಗುಣ, ರಾಸಾಯನಿಕ ಗುಣ ಅಭಿವೃದ್ಧಿಯಾಗಿರಬೇಕು. ಅಂತಹ ಭೂಮಿಯಲ್ಲಿ ಬೆಳೆದ ಬೆಳೆ ಆರೋಗ್ಯಕರವಾಗಿ ಬೆಳೆಯುತ್ತದೆ. ಹೀಗಿರುವಾಗ ಕೃಷಿಕರು ಭೂಮಿಗೆ ರಾಸಾಯನಿಕ ಗೊಬ್ಬರ ನೀಡಿದರೆ, ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳುಗಳು ವಿಷದ ವಾಸನೆ, ಪ್ರಭಾವದಿಂದ ಬದಕುಳಿಯುವುದು ಕಷ್ಟಕರವಾಗಿರುತ್ತದೆ. ಆಗ ಭೂಮಿಯ ಮೇಲೆ ಬಿದ್ದ ತ್ಯಾಜ್ಯ ಕಳಿಯುವುದಿಲ್ಲ. ನೀರು ಇಂಗುವುದಿಲ್ಲ, ಮಣ್ಣು ಗಟ್ಟಿಯಾಗುತ್ತದೆ. ಹೀಗಾಗಿ ಭೂಮಿ ತನ್ನ ಜೈವಿಕ ಗುಣ, ಭೌತಿಕ ಗುಣ, ರಾಸಾಯನಿಕ ಗುಣಗಳನ್ನು ಕಳೆದುಕೊಂಡು ಬರಡಾಗುತ್ತದೆ.
ಸಾವಯವ ಕೃಷಿ:
ಒಂದು ವೇಳೆ ನೀವು ಇನ್ನೂ ರಾಸಾಯನಿಕ ಕೃಷಿ ಪದ್ಧತಿಯಲ್ಲಿದ್ದರೆ, ಈಗಲು ನೀವು ಸಾವಯವ ಕೃಷಿಯತ್ತ ಹೆಜ್ಜೆ ಹಾಕಬಹುದು. ಇದರಿಂದ ನಿಮ್ಮ ಕೃಷಿ ಭೂಮಿ ಫಲವತ್ತಾಗುತ್ತದೆ ಮತ್ತು ಬೆಳೆ ಆರೋಗ್ಯಕರವಾಗಿ ಬೆಳೆದು ಉತ್ತಮ ಇಳುವರಿ ನೀಡಲು ಶಕ್ತವಾಗುತ್ತದೆ. ರಾಸಾಯನಿಕ ಮುಟ್ಟದ ಅನ್ನದಾತನ ಆರೋಗ್ಯದ ಜತೆಗೆ ವಿಷಮುಕ್ತ ಆಹಾರ ಸೇವಿಸುವ ಜನರ ಆರೋಗ್ಯವೂ ಚೆನ್ನಾಗಿರುತ್ತದೆ.
ವರದಿ: ಶ್ವೇತಾ ಕಲಕಣಿ
ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವೀಡಿಯೊ ಲಿಂಕ್ ಕ್ಲಿಕ್ ಮಾಡಿ
https://www.youtube.com/watch?v=FohfC0yB9D4
Blog