ಉಪ ಕಸುಬುಗಳಲ್ಲಿ ಹೈನುಗಾರಿಕೆಯಷ್ಟು ಲಾಭದಾಯಕ ಮತ್ತೊಂದಿಲ್ಲ ಎಂದು ಹೇಳಬಹುದು. ಏಕೆಂದರೆ ಒಂದಲ್ಲ, ಎರಡಲ್ಲ ಹತ್ತಾರು ಲಾಭಗಳನ್ನು ನೀಡುವ ಸಾರ್ವಕಾಲಿಕ ಕಾಮಧೇನು ಎಂದರೆ ಅದು ಹೈನುಗಾರಿಕೆ. ಹೈನೋದ್ಯಮದಲ್ಲಿ ಕೃಷಿಕರು ಕೆಲವೊಂದಿಷ್ಟು ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕಾಗುತ್ತದೆ ಹಾಗೂ ಕೆಲವು ವಿಚಾರಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ.
ಹೈನೋದ್ಯಮದಲ್ಲಿ ಹೆಚ್ಚು ಪ್ರಚಲಿತ ಪಡೆದಿರುವ ದೇಶಿಯ ತಳಿ ಅಂದ್ರೆ, ಅದು ಗಿರ್ ತಳಿ ಹಸು. ಇವುಗಳ ಹಾಲು ಹಾಗೂ ಗಂಜಲದಲ್ಲಿನ ವಿಶೇಷ ಗುಣಗಳೇ ಇವುಗಳಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ.
ಗಿರ್ ತಳಿಯ ಪರಿಚಯ:
ಗಿರ್ ತಳಿ ಇದು ಮೂಲತ: ಗುಜರಾತಿನ ಗಿರ್ ಗುಡ್ಡಗಾಡು ಪ್ರದೇಶ ಮತ್ತು ಕಟ್ಟೆವಾರ ಪ್ರಾಂತ್ಯದಿಂದ ತಳಿ. ಗಿರ್ ತಳಿಯಲ್ಲಿ ವಿವಿಧ ಬಣ್ಣಗಳ( ಕಂದು ಮತ್ತು ಕಡು ಕೆಂಪು ಮಿಶ್ರಿತ, ಕೆಂಪು ಬಣ್ಣ, ಹಳದಿ ಬಣ್ಣ, ಹಳದಿ ಮತ್ತು ಕೆಂಪು ಮಿಶ್ರಿತ) ಹಸುಗಳು ಕಂಡುಬರುತ್ತವೆ. ಇವು ನೀಳವಾದ ಕಾಲುಗಳನ್ನ, ದೇಹದ ರಕ್ಷಣೆಗೆ ಸದೃಢ, ನಯವಾದ ಚರ್ಮ, ದುಂಡಾದ ತಲೆ, ಎಲೆಗಳಂತೆ ಉದ್ದನೆಯ ಕಿವಿಗಳು, ಕಿವಿಗೆ ಸಮವಾಗಿ ಕೋಡುಗಳನ್ನು ಹೊಂದಿರುತ್ತವೆ. ದೊಡ್ಡ ಗಾತ್ರದ ದೇಹದೊಂದಿಗೆ, ಕತ್ತಿನ ಹಿಂದೆ ಉಬ್ಬನ್ನು ಹೊಂದಿರುತ್ತದೆ, ಇದು ಸೂರ್ಯನ ಕಿರಣಗಳನ್ನ ಹೀರಿಕೊಂಡು ಉತ್ಕೃಷ್ಟ ಹಾಲು ನೀಡುತ್ತದೆ.
ಇದಷ್ಟೆ ಅಲ್ಲದೆ ಗಿರ್ ತಳಿ ಹಸುಗಳು, ಸರಾಸರಿ 500 ರಿಂದ 550 ಕೆ.ಜಿ ವರೆಗೂ ತೂಕ ಹೊಂದಿದ್ದು, 135 ಸೆ.ಮೀ ನಷ್ಟು ಎತ್ತರವಿರುತ್ತದೆ. ಎಲ್ಲ ಪ್ರದೇಶದಲ್ಲೂ ಹೊಂದಿಕೊಳ್ಳುವಂತಹ ಸರಳ ಜೀವಿಯಾಗಿದ್ದು. ಸರಾಸರಿ 12 ರಿಂದ 15 ವರ್ಷ ಇದರ ಜೀವಿತಾವಧಿಯಾಗಿದೆ.
ಗಿರ್ ತಳಿ ಹಸುವಿನಿಂದ ಆಗುವ ಉಪಯೋಗ:
ಕೃಷಿಕರು ಗಿರ್ ತಳಿ ಹಸುಗಳನ್ನ ಸಾಕುವುದರಿಂದ ಅನೇಕ ಅನುಕೂಲಗಳಿವೆ. ಗಿರ್ ತಳಿ ಹಸುಗಳು ಸೀಮೆ ಹಸುಗಳಿಂತ ಹೆಚ್ಚು ಹಾಲು ಕೊಡುವುದರ ಜತೆಗೆ, ಅತಿ ಹೆಚ್ಚು ಪೋಷಕಾಂಶವನ್ನೂ ಹೊಂದಿರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಗಿರ್ ತಳಿ ಹಸುವಿನ ಹಾಲಿಗೆ ಮತ್ತು ತುಪ್ಪಕ್ಕೆ ಹೆಚ್ಚು ಬೇಡಿಕೆ ಇದೆ.
ಗಿರ್ ತಳಿ ಹಸುವಿನ ಗಂಜಲ ಮತ್ತು ಸಗಣಿಯಲ್ಲೂ ಅತಿ ಹೆಚ್ಚು ಪೋಷಕಾಂಶ ಹೊಂದಿರುವುದರಿಂದ ಇವುಗಳನ್ನ ಪಂಚಂಗವ್ಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹಾಗೆಯೇ ಈ ಸಗಣಿಯನ್ನ ಬಳಸಿದರೆ ಕೃಷಿ ಭೂಮಿ ಫಲವತ್ತಾಗುತ್ತದೆ, ಬೆಳೆ ಉತ್ತಮ ಫಸಲು ನೀಡುತ್ತದೆ.
ಗಿರ್ ಹಸುಗಳು ತಮ್ಮ ಜೀವಿತಾವಧಿಯಲ್ಲಿ ಸುಮಾರು 10 ಕರುಗಳನ್ನು ಹಾಕುತ್ತವೆ. ಇದಲ್ಲದೆ ಗಿರ್ ತಳಿಯ ಮತ್ತೊಂದು ವಿಶೇಷವೆಂದರೆ ಬೇರೆ ಹಸುಗಳಿಂತ ಬೇಗ ಪ್ರಾಯಕ್ಕೆ ಬಂದು, ಕರು ಹಾಕಲು ಶುರು ಮಾಡುತ್ತವೆ.
ಗಿರ್ ತಳಿ ಹಸುಗಳ ನಿರ್ವಹಣೆ:
ಗಿರ್ ತಳಿ ಹಸುಗಳನ್ನ ಸಾಕುವಾಗ ಸೀಮೆ ಹಸುಗಳಷ್ಟು ಖರ್ಚು ಮತ್ತು ನಿರ್ವಹಣೆ ಮಾಡುವ ಅವಶ್ಯಕತೆ ಇಲ್ಲ. ಯಾಕಂದ್ರೆ ಇವುಗಳು ಎಲ್ಲ ವಾತಾರವಣವನ್ನು ಹೊಂದಿಕೊಳ್ಳುತ್ತವೆ ಮತ್ತು ರೋಗಗಳಿಗೆ ತುತ್ತಾಗುವುದು, ಸಾವಿಗೀಡಾಗುವ ಸನ್ನಿವೇಶಗಳು ತುಂಬ ವಿರಳ.
ಗಿರ್ ತಳಿ ಹಸುಗಳನ್ನ ಸಾಕುವವರು, ಉತ್ತರ ಮತ್ತು ದಕ್ಷಿಣ ಮುಖವಾಗಿ ಶೆಡ್ ನಿರ್ಮಿಸಬೇಕು. ಶೆಡ್ ನಿರ್ಮಿಸುವಾಗಲೇ, ಡ್ರೈನೇಜ್ ಸಿದ್ಧಗೊಳಿಸಬೇಕು. ಯಾಕೆಂದರೆ ಹಸುಗಳಿರುವ ಸ್ಥಳ ಸ್ವಚ್ಛವಾಗಿದ್ದಲ್ಲಿ ರೋಗಗಳ ಹಾವಳಿ ನಿಯಂತ್ರಣದಲ್ಲಿರುತ್ತದೆ.
ಮೇವು ನಿರ್ವಹಣೆ ಹೇಗೆ ಮಾಡಬೇಕು?
ಗಿರ್ ತಳಿ ಸಾಕಾಣಿಕೆಯಲ್ಲಿ ಶೇಕಡಾ 50ರಷ್ಟು ಖರ್ಚನ್ನ ಹಸುಗಳ ಆಹಾರಕ್ಕೆ ಮೀಸಲಿಡುವುದು ಉತ್ತಮ. ದವಸ ಧಾನ್ಯ, ಹಸಿರು ಮೇವು,ಒಣ ಮೇವು, ಹಿಂಡಿಗಳನ್ನ ನೀಡಬೇಕು. ಆನಂತರ ಹಸುಗಳನ್ನ ಆಗಾಗ ಹೊರಗೆ ಕರೆದುಕೊಂಡು ಹೋಗಬೇಕು. ಏಕೆಂದರೆ ಹಸುಗಳು ನೈಸರ್ಗಿಕ ಗಾಳಿ, ಬೆಳಕು, ಆಮ್ಲಜನಕ ಪಡೆಯುವುದರೊಂದಿಗೆ, ತನಗೆ ಬೇಕಾದ ಆಹಾರ ತಿನ್ನುತ್ತದೆ. ಇದರಿಂದ ಹಸುವಿನ ದೇಹ ಮತ್ತು ಮೆದುಳು ವಿಶ್ರಾಂತಗೊಂಡು ಇನ್ನು ಹೆಚ್ಚು ಹಾಲು ಉತ್ಪಾದನೆಯಾಗಲು ಸಹಕಾರವಾಗುತ್ತದೆ.
ಒಟ್ಟಿನಲ್ಲಿ ವಿದೇಶಿ ತಳಿ ತಂದು ಸಾಕಾಣಿಕೆ ಮಾಡುವಾಗ, ಹಸುಗಳು ನಮ್ಮ ಈ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟದಾಯಕವಾಗಿರುತ್ತದೆ. ಅದೇ ನಮ್ಮ ದೇಸಿ ತಳಿಗಳು ನಮ್ಮ ವಾತಾವರಣಕ್ಕೆ ಬೇಗ ಹೊಂದಿಕೊಂಡು, ಪೌಷ್ಟಿಕಾಂಶವಿರುವ ಹಾಲನ್ನ ಕೊಟ್ಟು ಜನ ಸಾಮಾನ್ಯರ ಆರೋಗ್ಯ ಕಾಯುತ್ತವೆ.
ವರದಿ: ಶ್ವೇತಾ ಕಲಕಣಿ
ಗಿರ್ ತಳಿ ಹಸುವಿನ ಕುರಿತು ಮತ್ತಷ್ಟು ತಿಳಿಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=LGUa-Ddsdu4