ಹುರುಳಿಯಿಂದ ಮನುಷ್ಯನ ಆರೋಗ್ಯಕ್ಕೆ ಆಗುವ ಲಾಭ:
ಹುರುಳಿ ಇದೊಂದು ಪ್ರೋಟಿನ್ ಯುಕ್ತ ಪದಾರ್ಥವಾಗಿದ್ದು, ಇದನ್ನ ಸೇವಿಸುವುದರಿಂದ ಆಗುವ ಉಪಯೋಗ ಮಾತ್ರ ಅಷ್ಟಿಷ್ಟಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಅಪಾಯಕಾರಿ ರೋಗಗಳಿಂದ ರಕ್ಷಿಸುತ್ತೆ, ದೇಹದಲ್ಲಿ ಶಕ್ತಿ ಹೆಚ್ಚಿಸಲು ಮುಖ್ಯ ಪಾತ್ರ ವಹಿಸುತ್ತದೆ. ಇಷ್ಟೊಂದು ಶಕ್ತಿ ಹೊಂದಿರುವ ಹುರುಳಿ ಬೆಳೆಯನ್ನ ಮೇವಾಗಿ ಕುದುರೆಗೂ ನೀಡುತ್ತಾರೆ. ಹಾಗಾಗಿ ಇದನ್ನ ಹಾರ್ಸ್ ಗ್ರಾಮ್ ಎಂದು ಕರೆಯಲಾಗುತ್ತದೆ.
ಸಾವಯವದಲ್ಲಿ ಹುರುಳಿ ಬೆಳೆ:
ಸಾವಯವದಲ್ಲಿ ಹುರುಳಿ ಬೆಳೆಯಲು ಮುಂದಾದ್ರೆ ಕೃಷಿಕನಿಗೆ ಖರ್ಚು ಕಡಿಮೆಯಾಗುತ್ತದೆ. ಬೆಳೆ ಯಾವುದೇ ರೋಗ ಮತ್ತು ಕೀಟ ಬಾಧೆಗೆ ತುತ್ತಾಗುವುದಿಲ್ಲ. ಮಣ್ಣು ಫಲವತ್ತಾಗುತ್ತದೆ. ವಿಷಮುಕ್ತ ಹುರುಳಿ ಸಿಗುತ್ತದೆ. ಇದರ ಜತೆಗೆ ನಿರ್ವಹಣೆಯ ತಲೆ ನೋವು ಕಡಿಮೆಯಾಗುತ್ತದೆ.
ಹುರುಳಿಗೆ ಸೂಕ್ತವಾದ ವಾತಾವರಣ, ಮಣ್ಣು:
25 ರಿಂದ 30 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶವಿರುವ ಪ್ರದೇಶದಲ್ಲಿ ಹುರಳಿ ಬೆಳೆದರೆ ಉತ್ತಮ ಆರೋಗ್ಯಕರ ಬೆಳೆ ಬೆಳೆಯಬಹುದು. ಹುರಳಿಗೆ ಹೆಚ್ಚಿನ ತೇವಾಂಶ ಸೂಕ್ತವಲ್ಲ. ನಂತರ ಮಣ್ಣಿನ ವಿಚಾರಕ್ಕೆ ಬಂದ್ರೆ ಯಾವುದೇ ಮಣ್ಣಿನಲ್ಲೂ ಬೆಳೆಯಬಹದು.
ಭೂಮಿ ಸಿದ್ಧತೆ:
ಕೃಷಿಕರು ಹುರುಳಿ ಬೆಳೆ ಬೆಳೆಯಲು ಆಯ್ಕೆ ಮಾಡಿಕೊಂಡಾಗ ಮೊದಲನೆಯದಾಗಿ ವೈಜ್ಞಾನಿಕವಾಗಿ ಉಳುಮೆ ಮಾಡಿಕೊಳ್ಳುವುದು ಬಹು ಮುಖ್ಯವಾದದ್ದು. ಹೌದು ಮುಂಗಾರಿನಲ್ಲಿ ಬೆಳೆಯುವ ರೈತರು ಭೂಮಿಗೆ ಹಸಿರೆಲೆ ಗೊಬ್ಬರ ಸೇರಿಸಿ, ಮಾಗಿ ಉಳುಮೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಹಿಂಗಾರಿನಲ್ಲಿ ಬೆಳೆಯವ ರೈತರು ಬಿತ್ತುವ ಪೂರ್ವದಲ್ಲಿ ಒಂದೆರಡು ಬಾರಿ ಉಳುಮೆ ಮಾಡಿಕೊಳ್ಳಬೇಕಾಗಿದ್ದು ತುಂಬ ಅವಶ್ಯಕವಾಗಿವೆ.
ಬಿತ್ತುವ ಕಾರ್ಯ:
ಬಿತ್ತುವ ಪೂರ್ವದಲ್ಲಿ ರೈತರು ಬಹುಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ, ಬೀಜೋಪಚಾರ. ಹೌದು ಬಿತ್ತುವ ಪೂರ್ವದಲ್ಲಿ ಬೀಜಗಳಿಗೆ ಬೀಜೋಪಚಾರ ಮಾಡಿದ್ರೆ, ಬೀಜಗಳಿಗೆ ರಕ್ಷಣೆ ಸಿಗುತ್ತದೆ. ನೆನಪಿರಲಿ. ಇನ್ನು ಮುಂಗಾರಿನಲ್ಲಿ ಹುರುಳಿ ಬೆಳೆಯಲು ಮುಂದಾಗುವ ರೈತರು, ಜೂನ್ ಅಂತ್ಯದಲ್ಲಿ ಅಥವಾ ಅಗಸ್ಟ್ ಮೊದಲನೆ ವಾರದಲ್ಲಿ ಹುರುಳಿ ಬೀಜಗಳನ್ನ ಸಾಲಿನಿಂದ ಸಾಲಿಗೆ 40 ರಿಂದ 45 ಸೇಂಟಿ ಮೀಟರ್, ಗಿಡದಿಂದ ಗಿಡಕ್ಕೆ 5 ಸೇಂಟಿ ಮೀಟರ್ ಅಂತರವಿಟ್ಟು ಬಿತ್ತುವ ಕಾರ್ಯವನ್ನ ಪೂರ್ಣಗೊಳಿಸಬೇಕು. ನಂತರ ಹಿಂಗಾರಿನಲ್ಲಿ ಬೆಳೆಯುವ ರೈತರು, ಸಾಲಿನಿಂದ ಸಾಲಿಗೆ 30 ರಿಂ 35 ಸೇಂಟಿಮೀಟರ್ ಅಂತರ ನೀಡಿ, ಗಿಡದಿಂದ ಗಿಡಕ್ಕೆ 5 ಸೆಂಟಿ ಮೀಟರ್ ಅಂತರ ನೀಡಬೇಕಾಗುತ್ತದೆ.
ಪೋಷಕಾಂಶ:
ಬೆಳೆಯ ಬೆಳವಣಿಗೆ ಆರೋಗ್ಯಕರವಾಗಿರಬೇಕು ಅಂದ್ರೆ ಬೆಳೆಗೆ ಪೋಷಕಾಂಶ ಬಹಳ ಅವಶ್ಯಕ. ಮೊದಲನೆದಾಗಿ ಪ್ರಮುಖ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್ ಬೆಳೆಯ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಹಾಗಾಗಿ ಪ್ರತಿ ಎಕರೆಗೆ ಸಾರಜನಕ 10 ರಿಂದ 15 ಕೆ.ಜಿ, ರಂಜಕ 15 ಕೆ.ಜಿ, ಪೊಟ್ಯಾಶ್ 20 ಕೆ.ಜಿ ನೀಡಬೇಕಾಗುತ್ತದೆ. ನಂತರ ಸೂಕ್ಷ್ಮ ಪೋಷಕಾಂಶ ಮತ್ತು ಲಘು ಪೋಷಕಾಂಶ ಉಳುಮೆ ಪೂರ್ವದಲ್ಲಿ ಸೇರಿಸಿದ ಹಸಿರೆಲೆ ಗೊಬ್ಬರದಿಂದಲೇ ಬೆಳೆಗೆ ದೊರೆಯುತ್ತದೆ.
ನೀರಿನ ನಿರ್ವಹಣೆ:
ಹುರಳಿ ಬೆಳೆಗೆ ಹೆಚ್ಚು ನೀರು ಅಗತ್ಯವಿಲ್ಲ, ಹಾಗಾಗಿ ಇದನ್ನ ಮಳೆಯಾಶ್ರಿತದಲ್ಲಿ ರೈತರು ಬೆಳೆಯಲು ಆಯ್ಕೆ ಮಾಡಬಹುದು. ಒಂದು ವೇಳೆ ನೀರಾವರಿಯಲ್ಲಿ ಹುರುಳಿ ಬೆಳೆಯಲು ರೈತರು ಮುಂದಾದ್ರೆ, ಬಿತ್ತಿದ ನಂತರ, ಹೂ ಬೀಡುವ ಹಂತದಲ್ಲಿ ಮತ್ತು ಕಾಯಿ ಕಟ್ಟುವ ಹಂತಲ್ಲಿ ನೀರು ಕೊಟ್ಟರೆ ಸಾಕು.
ಕೀಟಬಾಧೆ ನಿಯಂತ್ರಣ:
ರಸ ಹೀರುವ ಕೀಟಗಳಾದ ಎಫಿಟ್ಸ್ , ಮೈಟ್ಸ್ ಮತ್ತು ಬಿಳಿ ನೊಣಗಳು ಎಲೆಯಲ್ಲಿ ರಸ ಹೀರಿ ಎಲೆಗಳನ್ನ ನಿಷ್ಕ್ರಿಯಗೊಳಿಸಿ ಬಿಡುತ್ತದೆ. ಇವುಗಳಿಂದ ಎಲೆಗಳು ಕಂದು ಬಣ್ಣ ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಂತಹ ಸಮಯದಲ್ಲಿ ಯಾವುದೇ ಕೀಟನಾಶಕಗಗಳನ್ನ ಬಳಸದೆ, ಸಾವಯವ ದಾರಿಯಲ್ಲಿ ಕೀಟಬಾಧೆಯನ್ನ ನಿಯಂತ್ರಿಸಿಕೊಳ್ಳುವುದು ಉತ್ತಮ.
ರೋಗ ಬಾಧೆ ನಿಯಂತ್ರಣ:
ಹುರುಳಿಯಲ್ಲಿ ಹೆಚ್ಚಾಗಿ ಕಂಡು ಬರುವ ರೋಗ, ಬೇರು ಕೊಳೆ ರೋಗ (ರೂಟ್ ರಾಟ್). ಅತಿಯಾದ ನೀರಿನ ಬಳಕೆಯಿಂದ ಈ ರೋಗ ಕಂಡು ಬರುತ್ತದೆ. ಹಾಗಾಗಿ ನೀರಿನ ನಿರ್ವಹಣೆಯಲ್ಲಿ ಬಹಳ ನಿಗಾ ವಹಿಸಬೇಕಾಗುತ್ತದೆ.
ಅಂತರ ಬೆಳೆ:
ಹುರುಳಿಯೊಂದು ದ್ವಿದಳ ಧಾನ್ಯವಾಗಿದ್ದರಿಂದ ಸಾರಜನಕದ ಪ್ರಕ್ರಿಯೆ ಇಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿ ರೈತರು ಹರುಳಿಯನ್ನ ಬೇರೆ ಪ್ರಮುಖ ಬೆಳೆಗಳ ಮಧ್ಯ ಅಂತರ ಬೆಳೆಯಾಗಿ ಬೆಳೆಯುವುದು ಉತ್ತಮ.
ಒಟ್ಟಿನಲ್ಲಿ ಕೃಷಿಕರು ಹುರುಳಿ ಬೆಳೆಯನ್ನ ಕಾಳುಗಳಿಗಾಗಿ ಬೆಳೆಯಬಹದು, ಹಸಿರೆಲೆ ಗೊಬ್ಬರವಾಗಿಯೂ ಬೆಳೆಯಬಹುದು ನಂತರ ಮೇವು ಬೆಳೆಯಾಗಿಯೂ ಬೆಳೆಯುವುದು. ಇದರಿಂದ ಭೂತಾಯಿಗೆ, ಮನುಕುಲಕ್ಕೆ, ಜಾನುವಾರಗಳಿಗೆ ಸಾಕಷ್ಟು ಲಾಭವಿದೆ.
ವರದಿ: ಶ್ವೇತಾ ಕಲಕಣಿ
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.youtube.com/watch?v=LxkjXrMLU5M&t=106s