Blog

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೃಷಿ ಅಧಿಕಾರಿಗಳ ಜತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯ ಪ್ರಗತಿ ಕುರಿತು ಕೃಷಿ ಸಚಿವರು ಹಾಗೂ ಇಲಾಖಾಧಿಕಾರಿಗಳು ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಸಚಿವರು, ಈ ಹಿಂದೆ ಎಲ್ಲಾ ವರ್ಗದ 2 ಹೆಕ್ಟೇರ್ ಭೂಮಿಯುಳ್ಳ ರೈತರಿಗೆ 90% ರಷ್ಟು, 5 ಹೆಕ್ಟೇರ್ ಭೂಮಿಯುಳ್ಳ ರೈತರಿಗೆ 45% ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಸಿಎಂ ಆದೇಶದಂತೆ ಹಿಂದಿನ ಮಾದರಿಯ ಸಬ್ಸಿಡಿಯನ್ನು ಮುಂದುವರೆಸಲಾಗುತ್ತಿದ್ದು, 5 ಹೆಕ್ಟೇರ್ ಮೇಲ್ಪಟ್ಟ ಜಮೀನು ಹೊಂದಿರುವ ರೈತರಿಗೆ ಸಬ್ಸಿಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 

ಆರ್.ಟಿ.ಸಿ ಪಹಣಿಯಲ್ಲಿ ಬೆಳೆ ಸಮೀಕ್ಷೆ ವಿವರ ನಮೂದು:

 ಕಳೆದ ಬಾರಿ ರೈತರಿಂದಲೇ ಬೆಳೆ ಸಮೀಕ್ಷೆಯನ್ನು ನಡೆಸುವ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಯೋಜನೆ ಯಶಸ್ವಿಯಾಗಿದ್ದು, ಕೇಂದ್ರದಿಂದ ಮೆಚ್ಚುಗೆಯನ್ನು ಪಡೆದಿದೆ. ಅಲ್ಲದೇ ಕರ್ನಾಟಕ “ಅಗ್ರಿ ಟ್ರೆಂಡ್ ಸೆಕ್ಟರ್” ಎನ್ನುವ ಕೇಂದ್ರದ ಶ್ಲಾಘನೆಗೂ ಪಾತ್ರವಾಗಿ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ. ಈ ವರ್ಷವೂ ಸಹ ಕಳೆದ ವರ್ಷದಂತೆ ರೈತನೇ ತನ್ನ ಬೆಳೆಯ ಸಮೀಕ್ಷೆ ನಡೆಸಿ “ನನ್ನ ಬೆಳೆ ನನ್ನ ಹಕ್ಕು” ಎಂದು ಪ್ರಮಾಣಪತ್ರ ನೀಡುವ ಸಮೀಕ್ಷೆಗೆ ಚಾಲನೆ ನೀಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ಸುಮಾರು 2.10 ಕೋಟಿ ಬೆಳೆ ಸಮೀಕ್ಷೆ ಉದ್ದೇಶ ಹೊಂದಲಾಗಿದೆ.

 

2021-22 ನೇ ಸಾಲಿನ ಪೂರ್ವ ಮುಂಗಾರಿನಲ್ಲಿ ಇಲ್ಲಿಯವರೆಗೆ ರೈತರೇ ಸ್ವತಃ ಆ್ಯಪ್ ನಲ್ಲಿ 1.09 ಲಕ್ಷ ಹಾಗೂ ಖಾಸಗಿ ನಿವಾಸಿಗಳ ಮೂಲಕ ಆ್ಯಪ್ ನಲ್ಲಿ 28.96 ಲಕ್ಷ ಅಪ್ಲೋಡ್ ಮಾಡಿದ್ದಾರೆ. ಪ್ರಸಕ್ತ ವರ್ಷದಿಂದ ರೈತರ ಬೆಳೆ ಸಮೀಕ್ಷೆ ಮಾಹಿತಿ ಆರ್.ಟಿ.ಸಿ. ಪಹಣಿಯಲ್ಲಿ ಸಹ ನಮೂದಾಗಲಿದೆ.

 

 ನಿಗದಿತ ಸಮಯದೊಳಗೆ ಬೆಳೆ ವಿಮೆ:

2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಒಟ್ಟು 36 ಬೆಳೆಗಳನ್ನು ಬೆಳೆ ವಿಮೆಗೆ ನೋಂದಾಯಿಸಲು ಅಧಿಸೂಚಿಸಲಾಗಿದ್ದು, ಇಲ್ಲಿಯವರೆಗೆ 3.71 ಲಕ್ಷ ರೈತರು 35 ಕೋಟಿ ರೂ. ಮೊತ್ತದ ಪ್ರೀಮಿಯಮ್ ಮೊತ್ತ ಪಾವತಿಸಿ ನೋಂದಣಿ ಮಾಡಿಕೊಂಡಿರುತ್ತಾರೆ. ಹೆಚ್ಚಿನ ವಿವರಗಳಿಗೆ ಸಮೀಪದ ಕೃಷಿ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದಾಗಿದ್ದು, ನಿಗದಿತ ಸಮಯದೊಳಗೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳುವಂತೆ ಸಚಿವ ಬಿ.ಸಿ.ಪಾಟೀಲ್ ರೈತ ಬಾಂಧವರಲ್ಲಿ ಮನವಿ ಮಾಡಿದರು.

 

ಬಿತ್ತನೆ ಬೀಜ ಕೊರತೆಯಾಗಿಲ್ಲ:

 

ರಾಜ್ಯದ ಯಾವುದೇ ಭಾಗದಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಕಂಡುಬಂದಿಲ್ಲ. ರೈತರ ಅಗತ್ಯಕ್ಕನುಸಾರವಾಗಿ ರಸಗೊಬ್ಬರ, ಬಿತ್ತನೆ ಬೀಜಗಳನ್ನು ಪೂರೈಸಲು ಇಲಾಖೆ ಸಜ್ಜಾಗಿದೆ ಕಾಳಸಂತೆಯಲ್ಲಾಗಲಿ ಅಥವಾ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದಾಗಲೀ ಮಾಡುವವರ ವಿರುದ್ಧ ಕೃಷಿ ವಿಚಕ್ಷಣಾ ದಳ ತನ್ನ ಹದ್ದಿನ ಕಣ್ಣಿಟ್ಟಿದೆ. ಇಂತಹ ಅಕ್ರಮ ಕಂಡುಬಂದಲ್ಲಿ ರೈತರಿಗೆ ಅನ್ಯಾಯವೆಸಗುವವರ ಮೇಲೆ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸಲಾಗುವುದು ಎಂದು ಬಿ.ಸಿ.ಪಾಟೀಲ್ ಎಚ್ಚರಿಸಿದರು.

 

ಮುಂಗಾರು ಹಂಗಾಮಿನಲ್ಲಿ ಈ ಬಾರಿ 77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇಲ್ಲಿಯವರೆಗೆ 44.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ  ಬಿತ್ತನೆಯಾಗಿದೆ. ಈ ಬಾರಿ 6 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಕ್ಕೆ ಬೇಡಿಕೆಯಿದ್ದು, 8 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ಲಭ್ಯತೆಯಿದ್ದು, 3.12 ಲಕ್ಷ ಕ್ವಿಂಟಾಲ್ ವಿತರಣೆಯಾಗಿದೆ. ಇನ್ನೂ ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ 0.55 ಲಕ್ಷ ಕ್ವಿಂಟಾಲ್ ದಾಸ್ತಾನಿದೆ. ಕಳೆದ ಏಪ್ರಿಲ್ ನಿಂದ ಜುಲೈವರೆಗೆ ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಯೂರಿಯಾ ಸೇರಿದಂತೆ ಒಟ್ಟು 17,44,448 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಇದರಲ್ಲಿ 11,54,320 ಆರಂಭಿಕ ಶಿಲ್ಕು, ಏಪ್ರಿಲ್ನಿಂದ ಜು.16 ರವರೆಗೆ 13,41,714 ಮಟ್ರಿಕ್ ಟನ್ ಸರಬರಾಜು ಆಗಿದೆ. 24,96,034 ಮೆಟ್ರಿಕ್ ಟನ್ ಒಟ್ಟು ದಾಸ್ತಾನು ಇದ್ದು, 14,61,424 ಮೆಟ್ರಿಕ್ ಟನ್ ಮಾರಾಟ, 10,34,610 ಉಳಿಕೆ ದಾಸ್ತಾನು ಇದೆ.

 



Blog




Home    |   About Us    |   Contact    |   
microbi.tv | Powered by Ocat Web Promotion Service in India | Promoting Websites through Ocat Content Marketing