Blog

       ಸಾವಯವ ಕೃಷಿಯಲ್ಲಿ ಜೈವಿಕ ಗೊಬ್ಬರಗಳ ಬಳಕೆ ಜತೆ ನೈಸರ್ಗಿಕವಾಗಿ ಬೆಳೆಯುವ ಗಿಡಗಳನ್ನು ಬಳಸಿಕೊಂಡು ಪೋಷಕಾಂಶ ಪೂರೈಕೆ ಮಾಡಲಾಗುತ್ತದೆ. ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆಯಾಗುತ್ತದೆ, ಇಳುವರಿ ಹೆಚ್ಚಾಗುತ್ತದೆ ಎಂದು ಎಷ್ಟೋ ಸಲ ಕೇಳಿದ್ದೇವೆ. ಅದರಲ್ಲಿ ಮುಖ್ಯವಾದ ಒಂದು ಸಸ್ಯ ಗ್ಲಿರಿಸಿಡಿಯಾ ಅಥವಾ ಗೊಬ್ಬರದ ಗಿಡ.  ಇದರಿಂದ ಉಚಿತ ಪೋಷಕಾಂಶ ಹೇಗೆ ಸಿಗುತ್ತದೆ? ಉತ್ತಮ ಇಳುವರಿ ಪಡೆಯಲು ಗೊಬ್ಬರದ ಗಿಡದ ಪ್ರಯೋಜನ ಏನು? ಇವೆಲ್ಲವನ್ನು ಈ ಬ್ಲಾಗ್ ನಲ್ಲಿ ನೋಡೋಣ.

 

        ಗ್ಲಿರಿಸಿಡಿಯಾ ಅಥವಾ ಗೊಬ್ಬರದ ಗಿಡ ಎಂದರೆ ಈಗಿನ ಸಾಕಷ್ಟು ರೈತರಿಗೆ ಗೊತ್ತೇ ಇಲ್ಲ. ಇದರ ಪ್ರಯೋಜನಗಳು ಗೊತ್ತಿಲ್ಲ. ರಾಸಾಯನಿಕ ಗೊಬ್ಬರಗಳ ಬಳಕೆ ಆರಂಭವಾದ ನಂತರ ನಮ್ಮ ರೈತರಿಗೆ ಪ್ರಕೃತಿಯಲ್ಲಿ ಉಚಿತವಾಗಿ ಸಿಗುತ್ತಿದ್ದ, ಕೃಷಿಗೆ ಪೂರಕವಾಗಿದ್ದ ಎಷ್ಟೋ ಗಿಡ-ಮರಗಳು ಮರೆತೇ ಹೋಗಿವೆ. ಆದರೆ ಇತ್ತೀಚೆಗೆ ಸಾವಯವ ಕೃಷಿ, ನೈಸರ್ಗಿಕ ಕೃಷಿಯ ಬಗ್ಗೆ ಜನರಿಗೆ ತಿಳಿದ ಮೇಲೆ ಗೊಬ್ಬರದ ಗಿಡ ಮುನ್ನೆಲೆಗೆ ಬರಲು ಶುರುವಾಗಿದೆ.


ಹಾಗಾದರೆ ಇದಕ್ಕೆ ಕಾರಣ ಏನು? ಇದರಿಂದ ಏನೆಲ್ಲಾ ಉಪಯೋಗಗಳು? ಇದೊಂದು ಲೆಗ್ಯುಮಿನಸ್ ಗಿಡ. ಈ ಜಾತಿಯ ಗಿಡಗಳು ಸಾರನಜಕ ಸ್ಥಿರೀಕರಣ ಮಾಡುತ್ತವೆ. ಸಾವಿರಾರು ರೂಪಾಯಿ ಕೊಟ್ಟು ಯೂರಿಯಾ ತಂದು ಜಮೀನಿಗೆ ಹಾಕುವುದು ಇದೇ ಸಾರಜನಕ ಒದಗಿಸಲು. ಆದರೆ ಈ ಜಾತಿಯ ಗಿಡಗಳು ಉಚಿತವಾಗಿ ಸಾರಜನಕ ಒದಗಿಸುತ್ತವೆ. ಇದರಿಂದ ಸಹಜವಾಗಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು.

 

ಗ್ಲಿರಿಸಿಡಿಯಾ (ಗೊಬ್ಬರದ ಗಿಡ)

      ಗ್ಲಿರಿಸಿಡಿಯಾ ಮಧ್ಯಮ ಗಾತ್ರದ ಮರವಾಗಿದ್ದು, ಇದು 10–12 ಮೀ. (33–39 ಅಡಿ) ಎತ್ತರ ಬೆಳೆಯುತ್ತದೆ. ಗೊಬ್ಬರದ ಗಿಡಕ್ಕೆ ಯಾವುದೇ ಗಂಭೀರ ಖಾಯಿಲೆ ಅಥವಾ ಕೀಟಗಳ ಸಮಸ್ಯೆ ಇಲ್ಲ. ಹಾಗಾಗಿ ಇದನ್ನು ಬೆಳೆಯುವುದು ಸರಳ ಹಾಗು ಖರ್ಚು ಮುಕ್ತವಾಗಿದೆ. ಹೆಚ್ಚು ನಿರ್ವಹಣೆ ಇಲ್ಲದೇ ಸುಲಭವಾಗಿ ಬೆಳೆಯಬಹುದು. ಕೇವಲ ಬೀಜ ಮಾತ್ರವಲ್ಲದೇ ಇದರ ರೆಂಬೆಯಿಂದಲೂ ಹೊಸ ಗಿಡ ಬೆಳೆಸಬಹುದು.

 

ಗ್ಲಿರಿಸಿಡಿಯಾದ ಉಪಯೋಗಗಳು

- ಇದರ ಉಪಯೋಗಗಳು ಅನೇಕ. ಕೃಷಿಯಲ್ಲಿ ಕೆಲವು ಬೆಳೆಗಳಿಗೆ ಇದನ್ನು ನೆರಳಿನ ಮರಗಳಾಗಿ(Shade trees) ಬೆಳೆಯುತ್ತಾರೆ. ಉದಾ: ಕೊಕೋವಾ, ಕಾಫಿಇತ್ಯಾದಿ

- ಗೊಬ್ಬರದ ಗಿಡವನ್ನು ಹಸಿರು ಗೊಬ್ಬರವಾಗಿ ಬಳಸಬಹುದು.

- ಮಲ್ಚಿಂಗ್ ಅಥವಾ ಹೊದಿಕೆಯಾಗಿ ಬಳಸಬಹುದು. ಇದು ಮಣ್ಣಿನ ತೇವಾಂಶ ಕಾಪಾಡುತ್ತದೆ ಮತ್ತು ಸೂಕ್ಷ್ಮಜೀವಿಗಳನ್ನು ಬಿಸಿಲಿನ ಶಾಖದಿಂದ ಕಾಪಾಡುತ್ತದೆ.

- ಇದನ್ನು ದನ, ಕುರಿ ಮತ್ತು ಮೇಕೆಗಳಿಗೆ ಮೇವಾಗಿ ಬಳಸಲಾಗುತ್ತದೆ. ಇದರ ಹೆಚ್ಚಿನ ಪ್ರೋಟೀನ್ ಅಂಶವು, ಕಡಿಮೆ-ಗುಣಮಟ್ಟದ ಉಷ್ಣವಲಯದ ಮೇವುಗಳಿಗೆ ಪೂರಕವಾಗಿದೆ.

- ಗೊಬ್ಬರದ ಗಿಡವನ್ನು ಜೈವಿಕ ಬೇಲಿಯಾಗಿ ಬೆಳೆಯಬಹುದು. ದುಬಾರಿ ಬೇಲಿಗಳನ್ನು ಬಳಸುವ ಬದಲಿಗೆ, ಬಳ್ಳಿ ಮರಗಳನ್ನು ಬೇಲಿಯಾಗಿ ಬೆಳೆಯುವುದನ್ನು ಜೈವಿಕ ಬೇಲಿ ಎನ್ನುತ್ತಾರೆ.

- ಸಾರಜನಕ ಸ್ಥಿರೀಕರಣ ಮಾಡಿ ಮಣ್ಣಿನಲ್ಲಿ ಸಾರಜನಕ ಪೋಷಕಾಂಶ ಹೆಚ್ಚಿಸುತ್ತದೆ.

- ಮಣ್ಣು ಸವಕಳಿಯನ್ನು ತಡೆಯುತ್ತದೆ. ಇದರಿಂದ ಫಲವತ್ತಾದ ಮೇಲ್ಮಣ್ಣನ್ನು ಸಂರಕ್ಷಿಸುತ್ತದೆ.

- ಮಣ್ಣಿನ ರಸಸಾರವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

 

       ಹೀಗೆ ಹಲವು ರೀತಿಯಲ್ಲಿ ಗೊಬ್ಬರದ ಗಿಡ ಕೃಷಿಯಲ್ಲಿ ಸಹಾಯವಾಗುತ್ತದೆ. ಗೊಬ್ಬರದ ಗಿಡದ ಪ್ರಯೋಜನಗಳಿಂದಲೇ ಇತ್ತೀಚೆಗೆ ಇದು ಮುನ್ನೆಲೆಗೆ ಬರುತ್ತಿದೆ. ರೈತರು ಇದರ ಮಹತ್ವ ತಿಳಿದು ತಮ್ಮ ಜಮೀನಿನಲ್ಲಿ ಇದನ್ನು ಬೆಳೆದು, ಪೋಷಕಾಂಶ ಪೂರೈಕೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು ಎಂಬುದು ನಮ್ಮ ಆಶಯ.

 

ಗೊಬ್ಬರದ ಗಿಡದ ಬಗ್ಗೆ ವಿವರವಾಗಿ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವೀಡಿಯೋ ನೋಡಿ.

https://www.youtube.com/watch?v=dEENoQFUxvg

 

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ: 9099262233

 

ಬರಹ: ರವಿಕುಮಾರ್

 

#kannadablog  #drsoil  #biofertilizer  #microbiagrotech  #agricultureblog  #agricultureinkannada  #organicfarming  #sustainablefarming  #lowinvestment  #soil  #organicspray  #gliricidia  #nitrogenfixation  #legumes  #soilerosion  #soilfertility  



Blog




Home    |   About Us    |   Contact    |   
microbi.tv | Powered by Ocat Online Advertising Service in India