Blog

ಕಬ್ಬಿನಲ್ಲಿಹೆಚ್ಚು ಇಳುವರಿ ಪಡೆಯುವ ಆತುರದಲ್ಲಿ ಮಣ್ಣಿಗೆ ಟನ್ ಗಟ್ಟಲೆ ರಾಸಾಯನಿಕ  ಗೊಬ್ಬರಗಳನ್ನು ಸುರಿದು ಅಪಾಯ ತಂದು ಕೊಳ್ಳುತ್ತೇವೆ. ಅಲ್ಲದೆ ಕಬ್ಬಿನ ರವದಿಗಳನ್ನು ಹೊಲದಲ್ಲಿಯೇ  ಸುಟ್ಟು ಅನೇಕ ಸಮಸ್ಯೆಗಳಿಗೆ  ದಾರಿ ಮಾಡಿಕೊಡುತ್ತಿದ್ದೇವೆ.


ಕಬ್ಬಿನ ತ್ಯಾಜ್ಯವಾದ ರವದಿಯನ್ನು ಸುಡುವುದರಿಂದ ಮಣ್ಣಿನ ಮೇಲ್ಪದರದ ಜೀವಾಣುಗಳು ನಾಶವಾಗುತ್ತವೆ.  ಉಳಿದ ಕುಳೆಗೂ ಹಾನಿಯಾಗುವುದು. ನೀರಿನ ಬಳಕೆ ಹೆಚ್ಚುತ್ತದೆ.  ಈ ರೀತಿ ಮಾಡುವ ಬದಲು, ರವದಿಯನ್ನು ಮಣ್ಣಿಗೆ ಸೇರಿಸಿ ಫಲವತ್ತತೆ ಹೆಚ್ಚು ಮಾಡಬಹುದು. ಒಂದು ಎಕರೆಯಲ್ಲಿ ಕಟಾವಾದ ಕಬ್ಬಿನಿಂದ ಸುಮಾರು 4 ರಿಂದ 6 ಟನ್ ರವದಿ ದೊರೆಯುತ್ತದೆ. ಒಂದು ಟನ್ ರವದಿಯಲ್ಲಿ 3.5 ಕೆ.ಜಿ ಸಾರಜನಕ, 1.3 ಕೆ.ಜಿ ರಂಜಕ ಮತ್ತು 6 ಕೆ.ಜಿ ಪೊಟ್ಯಾಷ್ ಇರುತ್ತದೆ.


ಈ ರವದಿಯಿಂದ ಮಣ್ಣಿನ ತೇವಾಂಶ ಆವಿಯಾಗುವುದನ್ನು ತಡೆಗಟ್ಟಬಹುದು. ಮಣ್ಣಿನಲ್ಲಿ ಇರುವ ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಾಗಿ ನೀರು ಇಂಗುವಿಕೆ, ಇಂಗಾಲದ ಪ್ರಮಾಣ  ಮತ್ತು ಇಳುವರಿ ಹೆಚ್ಚಾಗಿ, ಉತ್ಪಾದನಾ ವೆಚ್ಚ ಕಡಿಮೆಯಾಗುವುದು. ಆ ರವದಿಯನ್ನು ಬಳಸುವ ಕೆಲ ಪದ್ಧತಿಗಳು ಇಲ್ಲಿವೆ.


ಗುಣಿ ಪದ್ಧತಿ:


ತಲಾ ಒಂದು ಮೀಟರ್ ಉದ್ದ, ಅಗಲ ಹಾಗೂ ಆಳದ ಸಿಮೆಂಟಿನ ಗುಣಿಗಳನ್ನು ಮಾಡಬೇಕು. ಕೆಳಭಾಗದಲ್ಲಿ 15 ಸೆ.ಮೀ. ದಪ್ಪ ತುಂಡು ಮಾಡಿದ ರವದಿ ಹಾಕಿ, ಅದರ ಮೇಲೆ ಸೆಗಣಿಯ ನೀರು ಸಿಂಪಡಿಸಬೇಕು. (5 ಕೆ.ಜಿ. ಸೆಗಣಿ /25 ಲೀ. ನೀರು) ಒಂದು ಲೀಟರ್ ರವದಿ ಕಳೆಸುವ ಡಾ.ಸಾಯಿಲ್ ಡಿಕಂಪೋಸರ್ ರವದಿಗೆ ಹಾಕಿ ಮಣ್ಣಿನ ಹೊದಿಕೆ ಮಾಡಬೇಕು. ಹೀಗೆ 3 ರಿಂದ 4 ರವದಿ ಹೊದಿಕೆ ಹಾಕಿ ಗುಣಿ ತುಂಬಿ,  ವಾರಕ್ಕೊಮ್ಮೆ ನೀರು ಸಿಂಪಡಿಸಬೇಕು. 2 ರಿಂದ 3 ತಿಂಗಳಿಗೆ ಉತ್ತಮ ಗೊಬ್ಬರ ದೊರಕುವುದು.

 

ಪ್ರೆಸಮೆಡ್ ಬಳಸಿ ಗೊಬ್ಬರ ತಯಾರಿಕೆ:


10 ಮೀ. ಉದ್ದ 5 ಮೀ. ಅಗಲ 1 ಮೀ. ಆಳವಾದ ಗುಣಿ ತೆಗೆಯಬೇಕು. ಅದಕ್ಕೆ 500 ಕೆ.ಜಿ. ರವದಿ ಹಾಕಿ ನಂತರ  25 ಕೆ.ಜಿ ಸಗಣಿ ನೀರು (5 ಕೆ.ಜಿ ಸೆಗಣಿಗೆ 100 ಲೀ. ನೀರು) ಸಿಂಪಡಿಸಬೇಕು. ಬಳಿಕ 500 ಕೆ.ಜಿ ಪ್ರೆಸಮೆಡ್ ಗೊಬ್ಬರ ಹಾಕಬೇಕು. ಈ ರೀತಿ  ಒಂದರ ಮೇಲೆ ಒಂದು ಹಾಕಿ ಗುಣಿ ತುಂಬಿದ  ಮೇಲ್ಭಾಗವನ್ನು ಮಣ್ಣಿನಿಂದ ಅಥವಾ ಪ್ರೆಸಮೆಡ್‍ದಿಂದ ಮುಚ್ಚಬೇಕು.  ವಾರದಲ್ಲಿ  ಒಂದು ಬಾರಿ ನೀರನ್ನು ಸಿಂಪಡಿಸಿ ಮೂರು ತಿಂಗಳಿಗೊಮ್ಮೆ  ತಿರುವಿ ಹಾಕಿದಾಗ 6 ತಿಂಗಳಿಗೆ  ಉತ್ತಮ  ಗೊಬ್ಬರ ಸಿಗುವುದು.

 

ಏರು ಪದ್ದತಿಯಲ್ಲಿ ರವದಿ ಕಾಂಪೋಸ್ಟ್:


ಕುಳೆ ಕಬ್ಬಿನ ಹೊಲದ ಪಕ್ಕದಲ್ಲಿ 3 ಮೀ. ಉದ್ದ 2 ಮೀ. ಅಗಲ ಸ್ಥಳವನ್ನು ಹುಡುಕಿ, ಭೂಮಿಯ ಮೇಲೆ 15 ಸೆ.ಮೀ ಎತ್ತರ ಬರುವಂತೆ ತುಂಡು ಮಾಡಿದ ರವದಿಯನ್ನು ಹಾಕಿ, 25 ಕೆ.ಜಿ ಸಗಣಿ ನೀರು ಸಿಂಪಡಿಸಬೇಕು. ಬಳಿಕ 1 ಲೀಟರ್ ಡಾ.ಸಾಯಿಲ್ ಡೀಕಂಪೋಸರ್ ಅನ್ನು ಪ್ರತಿ ಟನ್ ರವದಿಗೆ ಸಿಂಪಡಿಸಬೇಕು. ಈ ರೀತಿಯ ರವದಿ ಗೊಬ್ಬರದ ಮಿಶ್ರಣ  ಮತ್ತು ಸೆಗಣಿ ನೀರು ಇವುಗಳ ಹೊದಿಕೆಯನ್ನು  ಒಂದರ ಮೇಲೆ ಒಂದು ಮಾಡಿ 2 ಮೀ. ಎತ್ತರ ಬರುವಂತೆ ಹೊಂದಿಸಬೇಕು. ಮೇಲ್ಪಾಗವನ್ನು ಮಣ್ಣಿನಿಂದ ಮುಚ್ಚಿ ವಾರಕ್ಕೆ ಒಂದು ಬಾರಿ ನೀರು ಸಿಂಪಡಿಸಬೇಕು. 2 ರಿಂದ 3 ತಿಂಗಳಿಗೆ ಉತ್ತಮ ಗೊಬ್ಬರ ಸಿದ್ಧವಾಗುತ್ತದೆ.

 

ಕುಳೆ ಪದ್ದತಿಯಲ್ಲಿ ರವದಿಯ ನೇರ ಬಳಕೆ:


ಕುಳೆ ಕಬ್ಬಿನಲ್ಲಿ ಬಿದ್ದರವದಿಯನ್ನು ಸಾಲು ಬಿಟ್ಟುಸಾಲಿಗೆ ಹಾಕಿ ಹೆಚ್ಚಾದ ರವದಿಯನ್ನು ಗುಣಿ ಪದ್ದತಿಯಲ್ಲಿ ಕಾಂಪೋಸ್ಟ್  ಮಾಡಲು ಉಪಯೋಗಿಸಬೇಕು. ಸಾಲಿನಲ್ಲಿ ಹಾಕಿದ ರವದಿಯ ಮೇಲೆ 1 ಎಕರೆಗೆ 1 ಲೀಟರ್ ಡಾ.ಸಾಯಿಲ್  ಡಿಕಂಪೋಸರ್  ಅನ್ನು ಸೆಗಣಿ ನೀರಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು.

 

 https://www.youtube.com/watch?v=ZjElTIEcmDI&t=14s

 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India