
ಕೃಷಿಗೆ ಹಸಿರೆಲೆ ಗೊಬ್ಬರ, ಪೂರ್ವಿಕರ ಕಾಲದಿಂದಲೂ ಪರಿಚಯವಿರುವ ಪದ್ಧತಿ. ಆದ್ರೆ ಇಂದು ಕೃಷಿಕರು ಹಸಿರೆಲೆ ಗೊಬ್ಬರಗಳನ್ನ ಮೂಲೆಗಿಟ್ಟು, ಅತಿಯಾದ ರಸಗೊಬ್ಬರಗಳ ಬಳಕೆಯಿಂದ ಭೂತಾಯಿಯನ್ನ ಸೊರಗುವಂತೆ ಮಾಡುತ್ತಿರುವುದೇ ವಿಪರ್ಯಾಸ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗಿ, ಮಣ್ಣಿನ ರಚನೆ ಹಾಳಾಗುತ್ತಿದೆ. ಮಣ್ಣಿನಲ್ಲಿ ಪೋಷಕಾಂಶದ ಸುಸ್ಥಿರತೆ ಕಾಣದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಬೆಳೆ ಪಡೆಯುವುದು ಕಷ್ಟಕರವಾಗಿದೆ.
ಹಸಿರೆಲೆ ಗೊಬ್ಬರ ಎಂದರೇನು?
ಸಸ್ಯಗಳ ಹಸಿರು ಎಲೆ, ಎಲೆಯ ಕಾಂಡ ಮತ್ತು ಬೇರು ಇವುಗಳ ಮೂಲದಿಂದ ದೊರೆಯುವ ಸಾವಯವ ವಸ್ತುಗಳನ್ನ ಹಸಿರೆಲೆ ಗೊಬ್ಬರವೆಂದು ಕರೆಯುತ್ತಾರೆ. ಹಸಿರೆಲೆ ಗೊಬ್ಬರದಲ್ಲಿ ಎರಡು ವಿಧ
- ಮುಖ್ಯ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಬೆಳೆದು, ಭೂಮಿಗೆ ಸಮರ್ಪಿಸುವುದು
- ಹೊರಗಿನಿಂದ ತಂದು ಹಸಿರೆಲೆ ಗೊಬ್ಬರವನ್ನ ಭೂಮಿಗೆ ನೀಡುವುದು
ಹಸಿರೆಲೆ ಗೊಬ್ಬರ ಗಿಡಗಳು ಯಾವುವು?
ಗ್ಲಿರಿಸಿಡಿಯಾ, ಡಯಂಚಾ, ಸೆಣಬು, ಹುರುಳಿ, ಹಲಸಂದಿ, ಸಂತೆಮರ ಗಿಡ, ಎಕ್ಕ, ಪಾರ್ಥೇನಿಯಮ್, ಕಬ್ಬಿನ ರವದಿ, ಭತ್ತದ ಹುಲ್ಲು. ಈ ಎಲ್ಲವನ್ನ ನಾವು ಹಸಿರೆಲೆ ಗೊಬ್ಬರವಾಗಿ ಬೆಳೆದು ಭೂಮಿಗೆ ಸೇರಿಸಿದರೆ ಪೋಷಕಾಂಶದ ಕೊರತೆಯಾಗುವುದಿಲ್ಲ.
ಮೊದಲನೆದಾಗಿ, ಈ ಮೇಲಿನ ಗಿಡಗಳಿಂದ ಎಷ್ಟು ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ದೊರೆಯುತ್ತದೆ ಎಂಬುವುದನ್ನ ತಿಳಿಯೋಣ.
|
ಹಸಿರೆಲೆ ಗೊಬ್ಬರ
|
ಸಾರಜನಕ
|
ರಂಜಕ
|
ಪೊಟ್ಯಾಶ್
|
|
ಹುರುಳಿ
|
0.91
|
0.18
|
0.65
|
|
ಹಲಸಂದಿ
|
0.71
|
0.15
|
0.58
|
|
ಸೆಣಬು
|
0.18
|
0.12
|
0.25
|
|
ಪಾರ್ಥೇನಿಯಂ(ಕಾಂಗ್ರೆಸ್)
|
2.68
|
0.68
|
1.45
|
|
ಸಂತೆಮರ ಗಿಡ
|
1.6
|
0.25
|
1.25
|
|
ಕಬ್ಬಿನ ರವದಿ
|
1.00
|
1.15
|
3.21
|
|
ಭತ್ತದ ಹುಲ್ಲು
|
0.58
|
0.23
|
3.16
|
|
ಡಯಂಚಾ
|
0.68
|
0.13
|
0.40
|
|
ಗ್ಲಿರಿಸಿಡಿಯಾ
|
0.68
|
0.16
|
0.30
|
|
ಎಕ್ಕ
|
0.42
|
0.12
|
0.67
|
|
ಹೊಂಗೆ
|
0.16
|
0.14
|
0.49
|
|
ಉದ್ದು ಮತ್ತು ಹೆಸರು
|
0.82
|
0.18
|
0.52
|
ಹಸಿರೆಲೆ ಗೊಬ್ಬರದ ಗಿಡಗಳನ್ನ ಬೆಳೆಯುವ ವಿಧಾನ:
ಕೃಷಿ ರಂಗಕ್ಕೆ ಕೃಷಿ ಭೂಮಿ ಮೂಲಾಧಾರ. ಹೀಗಿರುವಾಗ ಭೂಮಿಯ ಸುಸ್ಥಿರತೆಗೆ ಹಸಿರೆಲೆ ಗೊಬ್ಬರದ ಅವಶ್ಯಕತೆ ಹೆಚ್ಚಾಗಿದೆ. ಹಾಗಾಗಿ ವರ್ಷದಲ್ಲಿ ಒಂದು ಭಾರಿಯಾದ್ರು ಹಸಿರೆಲೆ ಗೊಬ್ಬರವನ್ನ ಭೂಮಿಗೆ ಸಮರ್ಪಿಸುವುದು ಉತ್ತಮ. ರೈತರು ತಮ್ಮ ಮುಖ್ಯ ಭೂಮಿಯಲ್ಲಿ ಬೆಳೆದು ಅಥವಾ ಹೊರಗಿನಿಂದ ತಂದಾದ್ರು ಭೂಮಿಗೆ ಹಸಿರೆಲೆ ಗೊಬ್ಬರ ಒದಗಿಸಬೇಕು.
ಮುಖ್ಯ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಬೆಳೆದು, ಭೂಮಿಗೆ ಸಮರ್ಪಿಸುವುದು:
ಮಳೆಯಾಶ್ರಿತ ರೈತರು ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಅಲ್ಪಾವಧಿ ಬೆಳೆಗಳನ್ನ. ಕಡಿಮೆ ಅವಧಿಯಲ್ಲಿ ಯಾವಾಗ ಹಸಿರೆಲೆ ಗೊಬ್ಬರ ಗಿಡಗಳನ್ನ ಬೆಳೆಯುದು ಎಂಬ ಸಂದೇಹಗಳಿರುತ್ತದೆ. ಅದಕ್ಕೆ ಉತ್ತರ ಮುಂದೆ ಓದಿ
ಮುಖ್ಯ ಭೂಮಿಯಲ್ಲಿ ಹಸಿರೆಲೆ ಗೊಬ್ಬರ:
ಮಳೆಯಾಶ್ರಿತ ರೈತರು, ಪ್ರಮುಖ ಬೆಳೆ ಬೆಳೆಯುವುದರ ಪೂರ್ವದಲ್ಲಿ ಅಂದ್ರೆ, ಏಪ್ರಿಲ್ ತಿಂಗಳ ಸಮಯದಲ್ಲಿ ದ್ವಿದಳ ಧಾನ್ಯಗಳಾದ ಹಲಸಂದಿ, ಹುರುಳಿ, ಉದ್ದು, ಸೆಣಬು ಯಾವುದಾದ್ರು ಬೀಜಗಳು ಹಾಕಿಕೊಂಡು, ಸರಿ ಸುಮಾರು 40 ರಿಂದ 45 ದಿನಕ್ಕೆ ಕಟಾವು ಮಾಡಿ, ಭೂಮಿಗೆ ಸೇರಿಸಬೇಕಾಗುತ್ತದೆ. ಅಂದ್ರೆ ಗಿಡಗಳು ಹೂ ಬಿಡುವ ಮುಂಚೆ ಮತ್ತು ಮೃದುವಾಗಿದ್ದಾಗಲೇ ಭೂಮಿಗೆ ಒಪ್ಪಿಸಬೇಕು. ಯಾಕಂದ್ರೆ ಗಿಡದಲ್ಲಿನ ಪೋಷಕಾಂಶ ಕಾಯಿಗಳಲ್ಲಿ ಸಂಗ್ರಹವಾಗಿಬಿಡುತ್ತೆ, ಆಗ ಭೂಮಿಗೆ ಸೇರಿಸಿದರೆ ಪ್ರಯೋಜನವಿಲ್ಲ. ನಂತರ ಗಿಡಗಳು ಬಲಿತರೆ ಭೂಮಿಯಲ್ಲಿ ಕಳಿಯಲು ಕಷ್ಟವಾಗುತ್ತದೆ. ಹಾಗಾಗಿ ಗಿಡಗಳು ಮೃದುವಿದ್ದಾಗಲೇ ಭೂಮಿಗೆ ಸಮರ್ಪಿಸಿ.
ಇನ್ನು ನೀರಾವರಿ ಇರುವ ರೈತರು ತಮ್ಮಲ್ಲಿ ನೀರಿನ ಸಂಪತ್ತು ಇರುವುದರಿಂದ, ವರ್ಷದಲ್ಲಿ ಒಂದೆರಡು ಬಾರಿಯಾದ್ರು ಹಸಿರೆಲೆ ಗೊಬ್ಬರದ ಗಿಡಗಳನ್ನ ಮೇಲಿನ ಕ್ರಮಗಳಂತೆ ಬೆಳೆದು, ಭೂಮಿಗೆ ಒಪ್ಪಿಸಿ.
ಅಂತರ ಬೆಳೆಯಾಗಿ ಹಸಿರೆಲೆ ಗೊಬ್ಬರ:
ಕೃಷಿಕರಿಗೆ ಹಸಿರೆಲೆ ಗೊಬ್ಬರವನ್ನ ಸಂಪೂರ್ಣ ಭೂಮಿಯಲ್ಲಿ ಬೆಳೆಯಲು ಆಗದಿದ್ದಾಗ, ಪ್ರಮುಖ ಬೆಳೆಯ ಮಧ್ಯ ದ್ವಿದಳ ಧಾನ್ಯ ಬೆಳೆ ಬೆಳೆದು, ಭೂಮಿಗೆ ಸಮರ್ಪಿಸಬಹದು. ಇದರಿಂದ ಪ್ರಮುಖ ಬೆಳೆಗಿರುವ ಸಾರಜನಕದ ಕೊರತೆಯನ್ನ ನೀಗಿಸಬಹದು.
ಬದುವಿನಲ್ಲಿ ಹಸಿರೆಲೆ ಗೊಬ್ಬರ:
ಕೃಷಿಕರು ಬದುಗಳಲ್ಲಿಯೂ ಸಹಿತ ಹಸಿರೆಲೆ ಗೊಬ್ಬರದ ಗಿಡಗಳನ್ನ ಬೆಳೆದು ಭೂಮಿಗೆ ನೀಡಬಹದು. ಅದ್ರಲ್ಲೂ ಗ್ಲಿರಿಸಿಡಿಯಾ ಬೆಳೆಯಲು ಆಯ್ಕೆ ಮಾಡಿಕೊಂಡಿದ್ದೇ ಆದ್ರೆ, ಕೃಷಿ ಭೂಮಿಗೆ ಪ್ರತಿ ಕಾಲದಲ್ಲೂ ಹಸಿರೆಲೆ ಗೊಬ್ಬರ ಸಿದ್ಧವಾಗಿರುತ್ತದೆ.
ಸೂಚನೆ: ರೋಗನಿರೋಧಕ ಶಕ್ತಿ ಮತ್ತು ವಾತಾವರಣಕ್ಕೆ ತಕ್ಕಂತಹ ಬೀಜಗಳನ್ನ ಆಯ್ಕೆ ಮಾಡಿಕೊಂಡು, ಹಸಿರೆಲೆ ಗೊಬ್ಬರ ತಯಾರಿಸಲು ಮುಂದಾಗಿ.
ಹೊರಗಿನಿಂದ ತಂದ ಹಸಿರೆಲೆ ಗೊಬ್ಬರ:
ತಮ್ಮ ಕೃಷಿ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ತಯಾರಿಸಲಾಗದ ಸಂದರ್ಭದಲ್ಲಿ, ಕೃಷಿಕರು ಹೊರಗಿನಿಂದ ಡಯಂಚಾ, ಗ್ಲಿರಿಸಿಡಿಯಾ, ಹೊಂಗೆ ಸೊಪ್ಪು, ಎಕ್ಕ, ಪಾರ್ಥೇನಿಯಂ ಗಿಡಗಳನ್ನ ತಂದು ಭೂಮಿಗೆ ಸೇರಿಸಬಹದು. ಇದರಿಂದಲೂ ಕೂಡ ಕೃಷಿ ಭೂಮಿಯನ್ನ ಫಲವತ್ತಾಗಿಸಬಹುದು.
ಹಸಿರೆಲೆ ಗೊಬ್ಬರದಿಂದ ಆಗುವ ಪ್ರಯೋಜನಗಳು:
- ಹಸಿರೆಲೆ ಗೊಬ್ಬರವನ್ನ ಭೂಮಿಗೆ ನೀಡುವುದರಿಂದ ಕೃಷಿ ಭೂಮಿ ಸಾವಯವ ಅಂಶದಿಂದ ಪ್ರಸನ್ನಳಾಗುತ್ತಾಳೆ. ಇದರಿಂದ ಭೂಮಿಯಲ್ಲಿ ಉಪಕಾರಿ ಜೀವಾಣು( ಸೂಕ್ಷಾಣು ಜೀವಿಗಳು ಮತ್ತು ಎರೆಹುಳು)ಗಳಿಗೆ ಉತ್ತಮ ಆಹಾರ ಸಿಗುತ್ತದೆ.
- ಸೂಕ್ಷ್ಮಾಣು ಜೀವಿಗಳ ಕ್ರಿಯಾಶಿಲ ಚಟುವಟಿಕೆಯಿಂದಾಗಿ ಹಸಿರೆಲೆ ಗೊಬ್ಬರ ಮಣ್ಣಿನಲ್ಲಿ ಕಳೆಯುತ್ತದೆ. ಕಳೆಯುವಾಗ ಆಮ್ಲ ಬಿಡುಗಡೆಯಾಗುತ್ತದೆ. ಇದರಿಂದ ಮಣ್ಣಿನಲ್ಲಿದ್ದ ಅಪಕಾರಿ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಭೂಮಿಯಲ್ಲಿದ್ದ ಕಳೆ ಬೀಜಗಳು ನಾಶವಾಗಿ, ಕಳೆ ನಿಯಂತ್ರಣದಲ್ಲಿರುತ್ತದೆ.
- ಹಸಿರೆಲೆ ಗೊಬ್ಬರ ಕಳಿತು, ಸಾವಯವ ಇಂಗಾಲವಾಗಿ ಮಾರ್ಪಾಡಾಗುತ್ತದೆ. ನಂತರ ಮಣ್ಣಿನ ರಸಸಾರ ಸುಧಾರಿಸುತ್ತದೆ.
- ಹಸಿರೆಲೆ ಗೊಬ್ಬವನ್ನ 40 ರಿಂದ 45 ದಿನದಲ್ಲೇ ಭೂಮಿಗೆ ಸೇರಿಸುವುದರಿಂದ ಪೋಷಕಾಂಶ ದೊರೆಯುತ್ತದೆ.
(ದ್ವಿದಳ ಧಾನ್ಯ ಬೆಳೆಗಳ ಬೇರಿನಲ್ಲಿರುವ ಗಂಟುಗಳಲ್ಲಿ ರೈಜೋಬಿಯಂ ಸೂಕ್ಷ್ಮಾಣು ಜೀವಿ, ವಾತಾವರಣದಲ್ಲಿರುವ ಸಾರಜನಕವನ್ನ ಹಿಡಿಟ್ಟುಕೊಂಡು ಬೆಳೆಗೆ ನೀಡುತ್ತದೆ)
- ಮಣ್ಣಿನಲ್ಲಿ ಜೈವಿಕ, ಭೌತಿಕ, ರಾಸಾಯನಿಕ ಗುಣ ಅಭಿವೃದ್ಧಿಯಾಗಿ ಮಣ್ಣು ಫಲವತ್ತಾಗುತ್ತದೆ.
- ಪ್ರಕೃತಿ ವಿಕೋಪ( ಸುನಾಮಿ, ಪ್ರವಾಹ)ದಿಂದಾಗಿ, ಮಣ್ಣು ಕೊಚ್ಚಿಕೊಂಡು ಹೋಗದಂತೆ ತಡೆಯುತ್ತದೆ.
- ಕಡಿಮೆ ಖರ್ಚಿನಲ್ಲಿ, ನೈಸರ್ಗಿಕವಾಗಿ ಕೃಷಿ ಭೂಮಿಯನ್ನ ಕಾಪಾಡಿಕೊಳ್ಳಲು ಹಸಿರೆಲೆ ಗೊಬ್ಬರ ಸಲಭ ದಾರಿ.
ಒಟ್ಟಿನಲ್ಲಿ ಕೃಷಿಕರು ಅಧಿಕ ಖರ್ಚಿನ ರಾಸಾಯನಿಕ ಗೊಬ್ಬರದ ದಾಸರಾಗದೆ, ಕೃಷಿ ಭೂಮಿ ಮತ್ತು ಬೆಳೆಯ ಒಳತಿಗಾಗಿ ಹಸಿರೆಲೆ ಗೊಬ್ಬರದತ್ತ ಹೆಜ್ಜೆ ಹಾಕುವುದು ಉತ್ತಮ.
ವರದಿ: ಶ್ವೇತಾ ಕಲಕಣಿ
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.youtube.com/watch?v=cE_rlLvoHNo