Blog

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅಕ್ಕಿತಿಮ್ಮನಹಟ್ಟಿಯಲ್ಲಿನ  ಅಡಿಕೆ ತೋಟದಲ್ಲಿ ಆಯೋಜಿಸಿದ್ದ 1 ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ರೈತರನ್ನು ಉದ್ಧೇಶಿಸಿ ಡಾ.ಹುಲ್ಲುನಾಚೆಗೌಡರು ಮಾತನಾಡಿದರು. ಸುಮಾರು 50 ರೈತರು ಬೆಳಗ್ಗೆಯಿಂದ  ಸಂಜೆಯವರೆಗೂ ಆಸಕ್ತಿಯಿಂದ ಪಾಲ್ಗೊಂಡಿದ್ದರು.


ಅಕ್ಕಿತಿಮ್ಮನಹಟ್ಟಿಯ ರೈತರಾದ ಪ್ರದೀಪ್ ತಮ್ಮ ಅಡಿಕೆ ತೋಟಕ್ಕೆ ರೈತರ ಸಂಜೀವಿನಿಯಾದ ಡಾ.ಸಾಯಿಲ್ ಬಳಸಿದ್ದರೂ, ಆ ತೋಟವು ಹೆಚ್ಚು ಇಳುವರಿಯಿಂದ ಕೂಡಿರಲಿಲ್ಲ. ಅತಿಯಾದ ನೀರು ಕೊಡುವಿಕೆ, ಹೆಚ್ಚು ತೂಕದ ಟ್ರ್ಯಾಕ್ಟರ್ ನಲ್ಲಿ ಉಳುಮೆ ಮಾಡುವಿಕೆ ಮತ್ತು ತೋಟದಲ್ಲಿ ತ್ಯಾಜ್ಯಗಳ ಕೊರತೆ; ಈ ಮೂರು ಪ್ರಮುಖವಾದ ಕಾರಣಗಳನ್ನು ಡಾ.ಹುಲ್ಲುನಾಚೆಗೌಡರು ತೋರಿಸಿಕೊಟ್ಟರು.


ಫಲವಿಲ್ಲದ ಆಡಿಕೆ ಮರದ ಅಡಿಯ ಮಣ್ಣನ್ನು ಅಗೆದು ನೋಡಿದಾಗ, ಅಲ್ಲಿನ ಭೂಮಿ ಗಡುಸಾಗಿತ್ತು, ಬೇರುಗಳು ಅಭಿವೃದ್ಧಿಯಾಗದೇ, ಕೆಲವು ಬೇರುಗಳು ಕಪ್ಪಾಗಿ ಕೊಳೆಯುತ್ತಿದ್ದವು  ಮತ್ತು ಜೈವಿಕ ಪರಿಸರವಿರಲಿಲ್ಲ. ಹಾಗೆಯೇ ಪಕ್ಕದ ಹುಲುಸಾಗಿ ಇಳುವರಿಯಿರುವ ಮರದ ಮಣ್ಣನ್ನು ತೆಗೆದಾಗ, ಅಲ್ಲಿ ಬೇರುಗಳು ಮೇಲೆಯೇ ಇದ್ದು, ತಂತು ಬೇರುಗಳು ಯಥೇಚ್ಛವಾಗಿದ್ದವು ಮತ್ತು ಎರೆಹುಳುಗಳ ರಾಶಿಯೇ ಅಲ್ಲಿತ್ತು. ಕೆಲವೇ ಅಡಿಗಳ ಅಂತರದ ವ್ಯತ್ಯಾಸವನ್ನು ಕಂಡು ರೈತರು ಆಶ್ಚರ್ಯಚಕಿತರಾದರು ಮತ್ತು ಅವರಿಗೆ ವಿಷಯ ಚೆನ್ನಾಗಿ ಮನವರಿಕೆಯಾಯಿತು.


ನ್ನೂ ಮೂರ್ನಾಲ್ಕು ಮರಗಳ ವ್ಯತ್ಯಾಸವನ್ನು ತೋರಿಸಲಾಯಿತು. ಎಲ್ಲ ರೋಗಗಳಿಗೂ ಮೂಲ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳು ಇಲ್ಲದೆ ಇರುವುದು. ಈ ಗುಣಗಳ ಕ್ಷೀಣಿಸುವಿಕೆಯಿಂದ ಎಲ್ಲ ಸಮಸ್ಯೆಗಳು ಉದ್ಭವವಾಗುತ್ತವೆ. ಪ್ರತಿಯೊಂದು ಮರದ ಸುತ್ತಲೂ ಒಂದೊಂದು ತಿಪ್ಪೆಯನ್ನು ಮಾಡಬೇಕು. ಮರದಿಂದ ಬೀಳುವ ತ್ಯಾಜ್ಯಗಳನ್ನು ಅಲ್ಲಿಯೇ ಮಲ್ಚಿಂಗ್ ಮಾಡಬೇಕು. ಇದರಿಂದ ಭೂಮಿ ಮೃದುವಾಗಿ ಜೈವಿಕ ಪರಿಸರ ನಿರ್ಮಾಣವಾಗುತ್ತದೆ.


ಒಂದು ಗ್ರಾಂ ಮಣ್ಣಿನಲ್ಲಿ 2.9 ಕೋಟಿ  ಉಪಕಾರಿ ಸೂಕ್ಷ್ಮಜೀವಿಗಳ ಅದ್ಭುತ ಕುಟುಂಬ ವಿರುತ್ತದೆ. ಇವೇ ನಮ್ಮ ತೋಟದ ನೈಸರ್ಗಿಕ ಕಾರ್ಮಿಕರು. ಇವರು ನಮ್ಮ ತೋಟದಲ್ಲಿ ಚೆನ್ನಾಗಿ ಕೆಲಸ ಮಾಡಿದರೆ, ರೈತ ಕೋಟ್ಯಾಧೀಶನಾಗುತ್ತಾನೆ. ಈ ರಹಸ್ಯವನ್ನು ರೈತರು ಅರ್ಥಮಾಡಿಕೊಳ್ಳಬೇಕು.


ಟ್ರ್ಯಾಕ್ಟರ್ ನಂತಹ ಟನ್ ಗಟ್ಟಲೆ ತೂಕದ ವಾಹನಗಳು ತೋಟಕ್ಕೆ ಬಂದರೆ, ಉಪಕಾರಿ ಜೀವಿಗಳು ನಾಶವಾಗುತ್ತವೆ. ಅತಿಯಾಗಿ ನೀರು ಬಿಟ್ಟರೆ ತೇವಾಂಶ ಜಾಸ್ತಿಯಾಗಿ ಮಣ್ಣಿನಲ್ಲಿ ಆಮ್ಲಜನಕವಿಲ್ಲದೆ ಅಪಕಾರಿ ಸೂಕ್ಷ್ಮಜೀವಿಗಳು ಜಾಸ್ತಿಯಾಗಿ, ಮರಗಳು ರೋಗಗಳಿಗೆ ತುತ್ತಾಗುತ್ತವೆ. ಹಾಗಾಗಿ ರೈತರು ಇಂಥ ಅಮೂಲ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಉಳುಮೆ ಮಾಡುವುದರಿಂದ ಮರದ ಬೇರುಗಳಿಗೆ ಹಾನಿಯಾಗಿ ಅವುಗಳ ಮುಖಾಂತರ ತೆಗೆದುಕೊಳ್ಳುತ್ತಿದ್ದ ನೀರು-ಆಹಾರ ನಿಂತುಹೋಗಿ ಮರಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇಳುವರಿಯೂ ಕ್ಷೀಣಿಸುತ್ತದೆ.


ತೋಟದ ಅಂಚಿನಲ್ಲಿದ್ದ ತೇಗದ ಮರದಡಿಯಲ್ಲಿ ಮಣ್ಣು ಫಲವತ್ತಾಗಿರುವುದನ್ನು ತೋರಿಸಿಕೊಟ್ಟರು. ಕಾಡಿನ ಮರಗಳು ಉಳುಮೆಯಿಲ್ಲದೆ, ರಾಸಾಯನಿಕ ಗೊಬ್ಬರವಿಲ್ಲದೆ ಎಷ್ಟೊಂದು ಫಲವತ್ತತೆಯಿಂದ ಕೂಡಿರುತ್ತವೆ. ಆದರೆ ನಾವು ಅತಿಯಾದ ಉಳುಮೆಮಾಡಿ, ರಾಸಾಯನಿಕ ಗೊಬ್ಬರ, ಅತಿಯಾಗಿ ನೀರು ಹಾಯಿಸಿ ತೋಟಗಳನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ ಎಂದು ಡಾ.ಕೆ.ಆರ್.ಹುಲ್ಲುನಾಚೆಗೌಡರು ತಿಳಿಸಿದರು.


ನಂತರ ಪಕ್ಕದಲ್ಲೇ ಇದ್ದ ರೋಗಗ್ರಸ್ಥ ತೋಟಕ್ಕೆ ಭೇಟಿ ನೀಡಿ, ಅಲ್ಲಿನ ತಪ್ಪು ಕ್ರಮಗಳನ್ನು ತೋರಿಸಿಕೊಟ್ಟರು. ಹಾಗೆಯೇ ಪ್ರದೀಪ್ ಅವರ ಮತ್ತೊಂದು ತೋಟದಲ್ಲಿ, ಫಲಭರಿತ ಹಾಗೂ ಫಲವಿಲ್ಲದೆ ಇರುವ ಮರಗಳ ಮಣ್ಣಿನ ಗುಣಗಳನ್ನು ಪ್ರತ್ಯಕ್ಷವಾಗಿ ತೋರಿಸಿದರು. ಅಂತರ ಬೆಳೆಯಾಗಿ ರೈತರು ತಮ್ಮ ತೆಂಗು-ಅಡಿಕೆ ತೋಟಗಳಲ್ಲಿ ತಪ್ಪದೆ ಬಾಳೆಯನ್ನು ಹಾಕಿಕೊಳ್ಳಬೇಕು. ಅದರಿಂದ ಅನೇಕ ಲಾಭಗಳು ಆ ತೋಟಕ್ಕೆ ಸಿಗುತ್ತವೆ. ಮುಖ್ಯವಾಗಿ ಪೊಟ್ಯಾಷ್ ಅಂಶ ಸಿಕ್ಕಿ ಆ ತೋಟದ ಇಳುವರಿ ಜಾಸ್ತಿಯಾಗುತ್ತೆ, ಬಾಳೆಯ ತ್ಯಾಜ್ಯಗಳಿಂದ ಭೂಮಿ ಫಲವತ್ತಾಗಿ, ಭೂಮಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಜಾಸ್ತಿಯಾಗುತ್ತೆ. ಹಾಗೆಯೇ ಅಂತರ ಬೆಳೆಗಳಾಗಿ ಕಾಳುಮೆಣಸು, ಜಾಕಾಯಿ ಮುಂತಾದವನ್ನು ಹಾಕಿಕೊಳ್ಳಬಹುದು. ಕೃಷಿ ರಣ್ಯದ ಭಾಗವಾಗಿ ಟಿಶ್ಯು ಕಲ್ಚರ್ ಟೀಕ್(ತೇಗ) ಬೆಳೆಯಬಹುದು. ಇವೆಲ್ಲ ಕ್ರಮಗಳಿಂದ ರೈತರು ಒಂದು ಎಕರೆ ಅಡಿಕೆ ತೋಟದಿಂದ ವರ್ಷಕ್ಕೆ 10 ಲಕ್ಷ ರೂಪಾಯಿಗಳನ್ನು ಸಂಪಾದಿಸಬಹುದು" ಎಂದು ರೈತರ ಸಮ್ಮುಖದಲ್ಲೇ ಲೆಕ್ಕಹಾಕಿ ಡಾ.ಕೆ.ಆರ್.ಹುಲ್ಲುನಾಚೆಗೌಡರು ತೋರಿಸಿಕೊಟ್ಟರು.


ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈತರ ಆದಾಯವನ್ನು ದ್ವಿಗುಣ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿವೆ. ಆದರೆ ನಮ್ಮ ಸಮಗ್ರ, ಸುಸ್ಥಿರ, ಸಾವಯವ ಪದ್ದತಿಯನ್ನು ಅಳವಡಿಸಿಕೊಂಡರೆ, ರೈತರ ಆದಾಯ ತ್ರಿಗುಣಕ್ಕಿಂತ ಹೆಚ್ಚಾಗುತ್ತದೆ. ನಮ್ಮ ಪದ್ಧತಿಯಿಂದ 1  ಎಕರೆ ಅಡಿಕೆ ತೋಟದಲ್ಲಿ 100 ಕ್ವಿಂಟಾಲ್ ಹಸಿಅಡಿಕೆ ತೆಗೆಯಬಹುದು. ತೆಂಗಿನ ತೋಟದಲ್ಲಿ ಒಂದು ಮರಕ್ಕೆ 200 ಕಾಯಿಗಳಿಗಿಂತಲೂ ಹೆಚ್ಚು ಫಸಲನ್ನು ಕಾಣಬಹುದು ಎಂದು ವಿಜ್ಞಾನಿಗಳು ರೈತರ ನಂಬಿಕೆಯನ್ನು ಬಲಪಡಿಸಿದರು.


ಕಾರ್ಯಕ್ರಮದಲ್ಲಿ ಡಾ.ವಿಕ್ರಮ್, ಮಂಜುನಾಥ್, ಶ್ರೀಕಾಂತ್, ಸಾಯಿಲ್ ಡಾಕ್ಟರ್ ಗಳಾದ ಚೇತನ್, ಶಿಲ್ಪ, ಮಹೇಶ್, ಶ್ರೀನಿವಾಸ್, ಗಿರೀಶ್ ಸೇರಿದಂತೆ ನುರಿತ ತಜ್ಞರ ತಂಡ ಪಾಲ್ಗೊಂಡಿತ್ತು.

ವರದಿ: ಶ್ರೀನಿವಾಸ ರೈತ


https://www.youtube.com/playlist?list=PLuN9VcGQAtK4-ekaTF27JLdMjjqefCkTE


 




Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India