Blog

ಬೆಳೆ ವಿಮೆ ಎಂದರೇನು?

ಬೆಳೆ ವಿಮೆ ಎಂದರೇನು ಎಂಬುವುದನ್ನ ಸರಳವಾಗಿ ವ್ಯಾಖ್ಯಾನಿಸುವುದಾದರೆ, ಭವಿಷ್ಯದ ಸಂಭಾವ್ಯ ನಷ್ಟದಿಂದ ರೈತರು ತಮ್ಮನ್ನ ತಾವು ರಕ್ಷಿಸಿಕೊಳ್ಳುವುದು. ಹೌದು ವಿಮೆ ಸಂಸ್ಥೆಗೆ ಸರ್ಕಾರ ಸೂಚಿಸಿದ ಮೊತ್ತವನ್ನು ಪಾವತಿಸಿದ್ರೆ, ನಷ್ಟವುಂಟಾದ ಸಂದರ್ಭದಲ್ಲಿ ವಿಮೆದಾರರು ಪರಿಸ್ಥಿತಿಯನ್ನ ಎದುರಿಸಲು ಸಹಾಯಕ್ಕೆ ಬರುತ್ತಾರೆ.

ರಾಷ್ಟ್ರೀಯ ಬೆಳೆ ವಿಮಾ ಯೋಜನೆಯ ಮೂಲ ಉದ್ಧೇಶ?

ಪ್ರತಿ ಕೃಷಿಕರು ಬೆಳೆ ಬೆಳೆಯುವಾಗ ಒಳ್ಳೆ ಇಳುವರಿ ಮತ್ತು ಆದಾಯದ ನಿರೀಕ್ಷೆ ಹೊತ್ತು, ಬಿತ್ತಲು ಮುಂದಾಗುತ್ತಾರೆ. ಆದರೆ ಪ್ರಕೃತಿ ಮಾತೆಯ ಮುನಿಸು( ನೈಸರ್ಗಿಕ ಅವಗಡ, ಭೂಕಂಪ, ಸುನಾಮಿ, ಚಂಡಮಾರುತ, ಹಿಮ ಕರಗುವುದು, ಅತಿವೃಷ್ಟಿ,ಅನಾವೃಷ್ಟಿ) ಯಾರು ತಾನೆ ಬಲ್ಲರು?. ಇದರ ಜತೆಗೆ ಬೆಳೆಗೆ ಕಾಡುವ ಅತಿಯಾದ ಕೀಟಬಾಧೆ ಮತ್ತು ರೋಗಬಾಧೆ. ಇಂತಹ ಕ್ಲಿಷ್ಟ ಸಂದರ್ಭಗಳಲ್ಲಿ ರೈತರನ್ನ ಪಾರು ಮಾಡಲು ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯೇ ರಾಷ್ಟ್ರೀಯ ಬೆಳೆ ವಿಮೆ ಯೋಜನೆ.

ಇನ್ನು ಅದಷ್ಟೆ ಅಲ್ಲದೇ.. ಪ್ರಗತಿಪರ ವ್ಯವಸಾಯ ಪದ್ಧತಿಗಳು, ಹೆಚ್ಚಿನ ಮೌಲ್ಯ ಕೃಷಿ ಮತ್ತು ಅಧಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ರೈತರನ್ನ ಪ್ರೋತ್ಸಾಹಿ, ವಿಪತ್ತು ವರ್ಷಗಳಲ್ಲಿ ಕೃಷಿ ಆದಾಯ ಸ್ಥಿರಗೊಳಿಸುವುದು ಈ ಯೋಜನೆಯ ಮುಖ್ಯ ಉದ್ಧೇಶ.

ರಾಷ್ಟ್ರೀಯ ಬೆಳೆ ವಿಮಾ ಯೋಜನೆ ಯಾವಾಗ ಜಾರಿಯಾಯಿತು 

ರಾಜ್ಯದಲ್ಲಿ ರಾಷ್ಟ್ರೀಯ ಬೆಳೆ ವಿಮಾ ಯೋಜನೆಯನ್ನ ಕೇಂದ್ರ ಸರ್ಕಾರವು 1999 – 2000 ಸಾಲಿನಲ್ಲಿ ಜಾರಿ ಮಾಡಿತು. ನಂತರ ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ವಿಮಾ ಕಂಪನಿ (ಅನುಷ್ಠಾನ ಏಜೆನ್ಸಿ) ಮತ್ತು ಅರ್ಥಶಾಸ್ತ್ರ, ಅಂಕಿ ಅಂಶ ನಿರ್ದೇಶನಾಲಯದ ಸಮಾವೇಶ 2000ದ, ಮುಂಗಾರಿನಲ್ಲಿ ಕಾರ್ಯರೂಪಕ್ಕೆ ತಂದವು. ಈ ಯೋಜನೆಯಲ್ಲಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಗಳು, ಗ್ರಾಮೀಣ ಬ್ಯಾಂಕ್ ಗಳು, ಪ್ರಾಥಮಿಕ ಕೃಷಿ ಸಹಕಾರಿ ಸಮಾಜಗಳ ಸಕ್ರಿಯವಾಗಿ ಶಾಮೀಲಾಗಿರುವುದರಿಂದ ರಾಜ್ಯದಲ್ಲಿ ಅನುಷ್ಠಾನಗೊಂಡಿತು.

ಯೋಜನೆಯಡಿಯಲ್ಲಿ ಯಾವೆಲ್ಲ ಬೆಳೆಗಳು ಒಳಪಡುತ್ತವೆ?

ಅಕ್ಕಿ, ಜೋಳ, ಮೆಕ್ಕೆಜೋಳ, ಕಪ್ಪು ಕಡಲೆ, ಹಸಿರು ಕಡಲೆ, ತೊಗರಿ ಬೆಳೆ, ಶೇಂಗಾ, ಸೂರ್ಯಕಾಂತಿ, ಕಬ್ಬು, ಹತ್ತಿ, ಬಾಳೆ ಹಣ್ಣು, ಅರಿಶಿನ, ಮೆಣಸಿನಕಾಯಿ ಇನ್ನಿತರ ದ್ವಿದಳ ಮತ್ತ ಏಕದಳ ಧಾನ್ಯಗಳು ಒಳಪಡುತ್ತವೆ.

ಯಾವೆಲ್ಲ ರೈತರು ಈ ಯೋಜನೆಯಲ್ಲಿ ಒಳಪಡುತ್ತಾರೆ?

ಈಗಾಗಲೇ ಕೃಷಿ ಸಾಲ ಪಡೆದ ರೈತರು, ಕಡ್ಡಾಯವಾಗಿ ಈ ಯೋಜನೆಗೆ ಒಳಪಡುತ್ತಾರೆ. ಅವರಿಗೆ ಬೆಳೆ ಸಾಲದ ಮೊತ್ತಕ್ಕೆ ವಿಮಾ ಕಂತನ್ನ ಹೆಚ್ಚುವರಿಯಾಗಿ ಮಂಜೂರು ಮಾಡಲಾಗುತ್ತದೆ. ನಂತರ ಇಚ್ಛೆಯುಳ್ಳ, ಬೆಳೆ ಸಾಲ ಪಡೆಯದ ರೈತರಿಗೂ ಯೋಜನೆಯಲ್ಲಿ ಭಾಗವಹಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ಕ್ರಮ..

ಈ ಯೋಜನೆಯಡಿಯಲ್ಲಿ ಪಾಲ್ಗೊಳ್ಳುವ ರೈತರು ವಾಣಿಜ್ಯ ಪ್ರಾಂತೀಯ ಗ್ರಾಮೀಣ ಬ್ಯಾಂಕ್, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಅಥವಾ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಿಬೇಕಾಗುತ್ತದೆ. ನಂತರ ಯೋಜನೆಯ ಉಪಯೋಗ ಪಡೆಯಲು, ಬೆಳೆ ನಾಟಿ ಮಾಡಿ 30 ದಿವಸದೊಳಗೆ( ಜೂನ 30) ಅಥವ ನಿಗಧಿಪಡಿಸಿರುವ ದಿನಾಂಕದ ಒಳಗಾಗಿ ಬೆಳೆಯ ವಿವರಣೆ ಮತ್ತು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು-ಭೂಮಿ ಹೊಂದಿರುವ ದಾಖಲೆಗಳು, ಖಾತೆಯ ಪಾಸ್ ಬುಕ್, ಕಂದಾಯ ರಸೀದಿ.

ಸೂಚನೆ: ಅರ್ಜಿ ಸಲ್ಲಿಸಿದ ವೇಳೆ ನಮೂದಿಸಿದ ಬೆಳೆ ಬದಲಿಸಿ, ಬೇರೆ ಬೆಳೆ ಬೆಳೆಯಲು ಮುಂದಾದ್ರೆ, ಮತ್ತೊಂದು ಅರ್ಜಿಯ ಮೂಲಕ ಬೆಳೆಯ ವಿವರಣೆ ನೀಡಬೇಕು. ಇಲ್ಲವಾದ್ರೆ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಾಗುವುದಿಲ್ಲ.

ಬೆಳೆ ನಷ್ಟವಾದಾಗ ವಿಮೆ ಸಂಸ್ಥೆಯ ಪ್ರತಿಕ್ರಿಯೆ..!

ಒಂದು ಅಧಿಸೂಚಿತ ಘಟಕದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಶೇ.25ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ, ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ಎಲ್ಲ ರೈತರಿಗೂ ಬೆಳೆ ವಿಮೆ ನಷ್ಟ ಪರಿಹಾರ ಇತ್ಯರ್ಥಪಡಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ರೈತರು ತಮ್ಮ ವ್ಯಾಪ್ತಿ ಮತ್ತು ಬೆಳೆಯ ವಿವರಣೆ ಹಾಗೂ ಕಾರಣದೊಂದಿಗೆ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯ ಒಳಗೆ ಸೂಚನೆ ನೀಡಬೇಕಾಗಿರುವುದು ಕಡ್ಡಾಯವಾಗಿದೆ.

 

ವರದಿ: ಶ್ವೇತಾ ಕಲಕಣಿ

 

 

 



Blog




Home    |   About Us    |   Contact    |   
microbi.tv | Powered by Ocat Online Advertising & Content Marketing Service in India